ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ವೇಳೆ 'ದ್ವೇಷ ಬೇಡ' ಎಂಬ ಬ್ಯಾನರ್ ಪ್ರದರ್ಶಿಸಿದ ಸಾಮಾಜಿಕ ಕಾರ್ಯಕರ್ತರ ತಂಡ
ಬೆಂಗಳೂರು: ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ 'ಪ್ರೀತಿಯಿಂದ ದ್ವೇಷವನ್ನು ಪಂಚರ್ ಮಾಡಿ' ಎಂದು ಸಾಮಾಜಿಕ ಕಾರ್ಯಕರ್ತರ ತಂಡವೊಂದು ಬ್ಯಾನರ್ ಪ್ರದರ್ಶನ ಮಾಡಿದ್ದು, ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.
ಗುರುವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜಯನಗರದಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಪ್ರತಾಪ್ ಸಿಂಹ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಈ ವೇಳೆ ಐದರಿಂದ ಆರು ಜನರ ತಂಡವೊಂದು ಸ್ಥಳಕ್ಕೆ ಆಗಮಿಸಿ ಬ್ಯಾನರ್ ಪ್ರದರ್ಶನ ಮಾಡಿತು. ಬ್ಯಾನರ್ ನಲ್ಲಿ ʼಪ್ರೀತಿಯಿಂದ ದ್ವೇಷವನ್ನು ಪಂಚರ್ ಮಾಡಿʼ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿತ್ತು.
ಇಬ್ಬರು ಮಹಿಳೆಯರು ಈ ಬ್ಯಾನರ್ ಪ್ರದರ್ಶನ ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ತಂಡದ ಸದಸ್ಯ ವಿನಯ್ ಕುಮಾರ್ ಎಂಬವರು, ದೇಶದಲ್ಲಿ ಇರುವ ಕೋಮುವಾದ ವಿರೋಧಿಸಿ ಬ್ಯಾನರ್ ಪ್ರದರ್ಶನ ಮಾಡಿದ್ದೇವೆ. ತೇಜಸ್ವಿ ಸೂರ್ಯ ಬಂದುತ್ವ ಬೆಳೆಸುವ ಕೆಲಸ ಮಾಡಬೇಕು. ಬದಲಾಗಿ ಅವರು ದ್ವೇಷ ಭಾವನೆ ಉಂಟು ಮಾಡುವ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಜನರಲ್ಲಿ ದ್ವೇಷ ಭಾವನೆ ಹುಟ್ಟುವಂತೆ ಮಾಡಬಾರದು. ಅದಕ್ಕೆ ಪ್ರೀತಿ ಬೆಳೆಯಲಿ ದ್ವೇಷ ಬೇಡ ಎಂದು ಬ್ಯಾನರ್ ಪ್ರದರ್ಶನ ಮಾಡಿದ್ದೇವೆ. ನಮಗೆ ವೈಯಕ್ತಿಕವಾಗಿ ಅವರ ಮೇಲೆ ಸಿಟ್ಟಿಲ್ಲ. ಆದರೆ ಅವರು ಸಮಾಜದ ಸೌಹಾರ್ದ ಕೆಡಿಸುವ ಹೇಳಿಕೆ ಕೊಡಬಾರದು ಎಂದರು.