ಸದನದಿಂದ ತೆಗೆದು ಬಿಸಾಡುತ್ತೇನೆ, ಗೆಟ್‍ಔಟ್ : ಬಿಜೆಪಿ ಸದಸ್ಯರಿಗೆ ಸ್ಪೀಕರ್ ಖಾದರ್ ಎಚ್ಚರಿಕೆ

ಯುಟಿ ಖಾದರ್
ಬೆಂಗಳೂರು : ಸದನದ ಚರ್ಚೆ ವೇಳೆ ಘೋಷಣೆ ಕೂಗಿ, ಗದ್ದಲ ಎಬ್ಬಿಸಿದ ಬಿಜೆಪಿ ಸದಸ್ಯರ ನಡೆಗೆ ಕೆಂಡಾಮಂಡಲರಾದ ಸ್ಪೀಕರ್ ಯುಟಿ ಖಾದರ್, ಸದನದಿಂದ ತೆಗೆದು ಬಿಸಾಡುತ್ತೇನೆ, ಗೆಟ್‍ಔಟ್ ಎಂದು ಗದರಿ ಬಿಜೆಪಿ ಸದಸ್ಯರಿಗೆ ಎಚ್ಚರಿಕೆ ಕೊಟ್ಟ ಪ್ರಸಂಗ ಜರಗಿತು.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎಂಬ ಬಿಸಿ ಬಿಸಿ ಚರ್ಚೆ ನಡೆಯಿತು.
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದಾಗ ತಾಳ್ಮೆ ಕಳೆದುಕೊಂಡ ಸ್ಪೀಕರ್ ಯು.ಟಿ ಖಾದರ್, ಬಿಜೆಪಿ ಸದಸ್ಯ ಹರೀಶ್ ಪೂಂಜಾ ಸೇರಿದಂತೆ ಕೆಲ ಬಿಜೆಪಿ ಸದಸ್ಯರತ್ತ ನೋಡಿ, ನಾನು ತಾಳ್ಮೆಯಿಂದ ಇದ್ದೇನೆ. ಇಲ್ಲಿ ಇರಲು ಆಗದಿದ್ದರೆ ಸದನ ಬಿಟ್ಟು ಹೋಗಿ. ಇಲ್ಲವೆಂದರೆ, ನಾನೇ ತೆಗೆದು ಬಿಸಾಡಬೇಕಾಗುತ್ತದೆ. ಯಾರು ಎಂದು ನೋಡಲ್ಲ, ಹೊರಗಡೆ ಹೋಗಿ ಎಂದು ಎಚ್ಚರಿಸಿದರು.
ಅದರಲ್ಲೂ, ಬಿಜೆಪಿ ಸದಸ್ಯ ಹರೀಶ್ ಪೂಂಜಾಗೆ ತಮ್ಮ ಕೊರ್ಚಿ ಕಡೆ ಹೋಗುವಂತೆ ಸೂಚಿಸಿದಲ್ಲದೆ, ನಿನ್ನ ಸೀಟಿಗೆ ಹೋಗಿ ಮಾತನಾಡು. ಇಲ್ಲವೆಂದರೆ ಹೊರಗಡೆ ಹೋಗು, ಗೆಟ್ ಔಟ್ ಎಂದು ಖಾದರ್ ಗರಂ ಆದರು.
ಸ್ಪೀಕರ್ ಬಿಸಾಡುತ್ತೇನೆ ಎಂಬ ಪದ ಬಳಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಹಾಗೆ ಮಾತನಾಡುವುದು ಸರಿಯಲ್ಲ. ಯಾವ ಅಧ್ಯಕ್ಷರೂ ಹೀಗೆ ಮಾತನಾಡಿಲ್ಲ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ದನಿಗೂಡಿಸಿ, ಈ ಪದವನ್ನು ಕಡತದಿಂದ ತೆಗೆಯುವಂತೆ ಮನವಿ ಮಾಡಿದಾಗ ಸ್ಪೀಕರ್ ತೆಗೆಯುವಂತೆ ಸೂಚಿಸಿದರು.
ಇದಕ್ಕೂ ಮೊದಲು ಅಂಬೇಡ್ಕರ್ ಬಗ್ಗೆ ಮಾತನಾಡಿದಾಗ ಬಿಸಾಡುತ್ತೇನೆ ಎಂದರೆ ಏನು ಅರ್ಥ? ನಾವು ಬಿಟ್ಟಿಗೆ ಬಂದಿದ್ದೇವಾ? ಎಂದು ಹರೀಶ್ ಪೂಂಜಾ, ವೇದವ್ಯಾಸ ಕಾಮತ್ ಪ್ರಶ್ನಿಸಿದರು.
ಸರ್ಕಲ್‍ಗೆ ಅಂಬೇಡ್ಕರ್ ಹೆಸರಿಡುವ ಯೋಗ್ಯತೆ ಇಲ್ಲ..!
ಬಿಜೆಪಿ ಸದಸ್ಯರ ಅಸಮಾಧಾನದ ವೇಳೆ ತಿರುಗೇಟು ಕೊಟ್ಟ ಯು.ಟಿ.ಖಾದರ್, ಮಂಗಳೂರಿನ ಜ್ಯೋತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಕಟ್ಟಿ ಎಷ್ಟು ವರ್ಷವಾಯಿತು? ಒಂದು ಸರ್ಕಲ್ ಕಟ್ಟುವ ಯೋಗ್ಯತೆ ಇಲ್ಲ. ಇಲ್ಲಿ ಮಾತನಾಡುತ್ತೀರಾ ಎಂದು ಕರಾವಳಿ ಶಾಸಕರತ್ತ ನೋಡಿ ಗದರಿಸಿದರು.