ಶ್ರೀರಾಮಸೇನೆ ಮುಖಂಡ ಗಂಗಾಧರ್ ಕುಲಕರ್ಣಿ ಬಂಧನಕ್ಕೆ ಒತ್ತಾಯ; ಬಾಬಾ ಬುಡಾನ್ ದರ್ಗಾದ ಶಾಖಾದ್ರಿ ವಂಶಸ್ಥರಿಂದ ದೂರು ದಾಖಲು

Update: 2023-11-01 16:45 GMT

ಚಿಕ್ಕಮಗಳೂರು, ನ.1: ಇನಾಂ ದತ್ತಾತ್ರೇಯ ಬಾಬಾಬುಡಾನ್‍ಗಿರಿ ದರ್ಗಾ ವಿಚಾರವಾಗಿ ಇತ್ತೀಚೆಗೆ ಶ್ರೀರಾಮ ಸೇನೆ ಮುಖಂಡ ಗಂಗಾಧರ ಕುಲಕರ್ಣಿ ಅವರು ನ್ಯಾಯಾಲಯದ ಆದೇಶವನ್ನು ತಿರುಚಿ ಹೇಳಿಕೆ ನೀಡಿರುವುದಲ್ಲದೆ ಗೋರಿಗಳನ್ನು ತೆರವು ಮಾಡುತ್ತೇವೆ ಎನ್ನುವ ಮೂಲಕ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಗಂಗಾಧರ್ ಕುಲಕರ್ಣಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೈಯದ್ ಬುಡಾನ್ ಶಾ ಖಾದ್ರಿ ವಂಶಸ್ಥ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ(ಅಜ್ಮತ್‍ಪಾಷಾ) ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. 

ದತ್ತಮಾಲೆ ಅಭಿಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಶ್ರೀರಾಮಸೇನೆ ಮುಖಂಡ ಗಂಗಾಧರ್ ಕುಲಕರ್ಣಿ ಅವರು ಒಂದು ಧರ್ಮದವರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ʼಬಾಬಾ ಬುಡನ್‍ಗಿರಿ ದರ್ಗಾವನ್ನು ಹಿಂದೂ ಪೀಠ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದ್ದರಿಂದ ದತ್ತಪೀಠದಲ್ಲಿ ಶಾಖಾದ್ರಿ ಹಾಗೂ ಮೌಲ್ವಿಗಳಿಗೆ ಜಾಗವಿಲ್ಲ, ಅವರನ್ನು ಅಲ್ಲಿಂದ ಹೊರ ಹಾಕಬೇಕು. ಇಲ್ಲವಾದಲ್ಲಿ ನಾವೇ ಅವರನ್ನು ಅಲ್ಲಿಂದ ಹೊರ ಹಾಕುತ್ತೇವೆʼ ಎಂದು ಹೇಳುವ ಮೂಲಕ ಗಂಗಾಧರ್ ಕುಲಕರ್ಣಿ ಅವರು ನ್ಯಾಯಾಲಯದ ಆದೇಶವನ್ನು ತಿರುಚಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.

ನ್ಯಾಯಾಲಯ ಇಂತಹ ಯಾವುದೇ ತೀರ್ಪು ನೀಡದಿದ್ದರೂ ಗಂಗಾಧರ ಕುಲಕರ್ಣಿ ಅವರು ಸುಳ್ಳು ಹೇಳಿಕೆ ನೀಡುವ ಮೂಲಕ ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಗೋರಿಗಳನ್ನು ತೆರವು ಮಾಡುತ್ತೇವೆ. ಶಾಖಾದ್ರಿ, ಮೌಲ್ವಿಗಳನ್ನು ಹೊರ ಹಾಕುತ್ತೇವೆ ಎನ್ನುವ ಮೂಲಕ ಕೋಮು ಪ್ರಚೋಧನೆಗೆ ಕುಮ್ಮಕ್ಕು ನೀಡಿದ್ದಾರೆ. ಸದ್ಯ ದತ್ತಮಾಲೆ ಅಭಿಯಾನ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಶ್ರೀರಾಮಸೇನೆ ಮುಖಂಡರ ಹೇಳಿಕೆಗಳಿಂದ ಪ್ರಚೋಧನೆಗೊಳಗಾದವರು ಕೋಮು ಗಲಭೆ ಸೃಷ್ಟಿಸುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಗಂಗಾಧರ ಕುಲಕರ್ಣಿ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾ ಎಂಬುದು ಕಾಫಿ ಬೋರ್ಡ್ ಸೇರಿದಂತೆ ಎಲ್ಲ ಸರಕಾರಿ ದಾಖಲೆಗಳಲ್ಲೂ ಇದೆ. ವಾಸ್ತವ ಹೀಗಿದ್ದರು ಮುಖಂಡರು ನ್ಯಾಯಾಲಯ ಹಿಂದೂಪೀಠ ಎಂದು ತೀರ್ಪು ನೀಡಿದೆ ಎಂದು ಗೊಂದಲ ಮೂಡಿಸುತ್ತಿರುವುದು ನ್ಯಾಯಾಲಯ ಆದೇಶವನ್ನು ತಿರುಚುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡಲೇ ಶ್ರೀರಾಮಸೇನೆ ಮುಖಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ವೇಳೆ ಮುಖಂಡರಾದ ಜಂಶೀದ್‍ಖಾನ್, ನಾಸಿರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News