ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿ: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ರಾಜ್ಯದಲ್ಲಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ರವಿಕುಮಾರ್ ಗೌಡ ಗಣಿಗ, ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ನಿಷೇಧಿಸುವ ಕುರಿತು ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.
ಬೆಟ್ಟಿಂಗ್ ದಂಧೆ ಕೇವಲ ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಹರಡಿಕೊಂಡಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಚರ್ಚಿಸಿ ಕಠಿಣ ಕಾಯ್ದೆ ರೂಪಿಸಬೇಕಾದ ಅಗತ್ಯತೆ ಇದೆ. ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ನಾವು ರಾಜ್ಯಕ್ಕೆ ಸೀಮಿತವಾಗಿ ಕಠಿಣ ಕಾನೂನು ರೂಪಿಸುತ್ತೇವೆ ಎಂದು ಅವರು ಹೇಳಿದರು.
ಕ್ರಿಕೆಟ್ ಬೆಟ್ಟಿಂಗ್‍ನಿಂದಾಗಿ ರೌಡಿಸಂ ಹೆಚ್ಚಾಗುತ್ತಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕಅರಸಿನ ಕೆರೆ ಗ್ರಾಮದಲ್ಲಿ ಕೇವಲ 11 ಸಾವಿರ ರೂ.ಬೆಟ್ಟಿಂಗ್ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕೊಲೆಯಾಗಿದೆ. ಬೆಟ್ಟಿಂಗ್ ನಡೆಸುವವರು ಮೂರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುತ್ತಾರೆ. ಪೊಲೀಸರೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಾರೋಷವಾಗಿ ತಮ್ಮ ಕೆಲಸ ಮಾಡುತ್ತಿರುತ್ತಾರೆ. ಇವರಿಗೆ ಕಡಿವಾಣ ಹಾಕಲೇಬೇಕು.
ರವಿಕುಮಾರ್ ಗೌಡ ಗಣಿಗ, ಕಾಂಗ್ರೆಸ್ ಸದಸ್ಯ
ಬೆಟ್ಟಿಂಗ್ ಅನ್ನೋದು ಸಾವಿರಾರು ಕೋಟಿ ರೂ.ಗಳ ದಂಧೆಯಾಗಿದೆ. ಫುಟ್‍ಪಾತ್ ಮೇಲೆ ಇದ್ದವರು ಇವತ್ತು 50-60 ಕೋಟಿ ರೂ.ಗಳ ವಿಲಾಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಪೊಲೀಸರು, ಪ್ರಕರಣಗಳಿಗೆಲ್ಲ ಇವರು ಬಗ್ಗುವವರಲ್ಲ. ಜಯನಗರದಲ್ಲಿ ನನ್ನ ಪರಿಚಯಸ್ಥ ಡೆವಲಪರ್ ಒಬ್ಬ ಬೆಟ್ಟಿಂಗ್ ಗೀಳಿಗೆ ಬಿದ್ದು ತಮ್ಮ ಮನೆ, ಮಠ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿದ್ದಾನೆ. ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ವಿಶೇಷ ಪಡೆಯನ್ನು ರಚಿಸಬೇಕು. ಇಲ್ಲವೇ ಕಠಿಣವಾದ ಕಾನೂನು ಜಾರಿಗೆ ತರಬೇಕು.
ಆರ್.ಅಶೋಕ್, ವಿರೋಧ ಪಕ್ಷದ ನಾಯಕ
ಕೇಂದ್ರ ಹಾಗೂ ರಾಜ್ಯ ಸರಕಾರ ಸೇರಿ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಕಾನೂನು ರೂಪಿಸಬೇಕು. ಕೇಂದ್ರ ಸರಕಾರವು ಆನ್‍ಲೈನ್ ಗೇಮಿಂಗ್ ಗಳ ಮೇಲೆ ಶೇ.28ರಷ್ಟು ಜಿಎಸ್ಟಿ ವಿಧಿಸಿದೆ. 2024 ರಿಂದ 28ರ ವರೆಗೆ 7 ಸಾವಿರ ಕೋಟಿ ರೂ. ಟಿಡಿಎಸ್ ಆದಾಯ ಹಾಗೂ 74ಸಾವಿರ ಕೋಟಿ ರೂ.ಗಳಷ್ಟು ಜಿಎಸ್ಟಿ ನಿರೀಕ್ಷೆ ಮಾಡಲಾಗಿದೆ. ಮೊದಲು ಭಾರತದ ಕಂಪೆನಿಗಳ ಸರ್ವರ್ ಗಳಲ್ಲಿ ಆನ್‍ಲೈನ್ ಗೇಮ್‍ಗಳನ್ನು ಆಡುತ್ತಿದ್ದವರು ಜಿಎಸ್ಟಿ ಹಾಕಿದ ಬಳಿಕ ಚೀನಾ ಹಾಗೂ ಐರೋಪ್ಯ ರಾಷ್ಟ್ರಗಳ ಸರ್ವರ್ ನಲ್ಲಿ ಆಡುತ್ತಿದ್ದಾರೆ. ಇದೊಂದು ಪರ್ಯಾಯ ಆರ್ಥಿಕತೆಯಾಗಿದೆ. ಇಲ್ಲಿ ಕಪ್ಪು ಮತ್ತು ಬಿಳಿ ವಹಿವಾಟು ನಡೆಯುತ್ತಿದೆ.
ಪ್ರಿಯಾಂಕ್ ಖರ್ಗೆ, ಐಟಿ-ಬಿಟಿ ಸಚಿವ