ರಾಜ್ಯ ಸರಕಾರಕ್ಕೆ ಒಂದು ವರ್ಷ | ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ‘ವಿಶ್ವಕ್ಕೆ ಮಾದರಿ’ : ಸುರ್ಜೇವಾಲಾ

Update: 2024-05-19 15:00 GMT

ರಣದೀಪ್ ಸಿಂಗ್ ಸುರ್ಜೆವಾಲಾ | Photo: PTI

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ನಾಳೆ(ಮೇ 20)ಗೆ ಒಂದು ವರ್ಷ ಪೂರೈಸುತ್ತಿದೆ. ಕಡಿಮೆ ಅವಧಿಯಲ್ಲಿ ಸರಕಾರ ಅಪೂರ್ವ ಸಾಧನೆ ಮಾಡಿ, ಜನಮನ್ನಣೆ ಗಳಿಸಿದೆ. ಯಾವುದೇ ಜಾತಿ-ಧರ್ಮ ನೋಡದೇ ಎಲ್ಲ ವರ್ಗವನ್ನೂ ಸಮಾನಾಗಿ ಕಾಣುವ ಮೂಲಕ ಸರ್ವರಿಗೂ ಸಮಬಾಳು-ಸಮಪಾಲು ಎಂಬ ತತ್ತ್ವವನ್ನು ಸಾರಿದೆ’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಬಣ್ಣಿಸಿದ್ದಾರೆ.

ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಗ್ಯಾರಂಟಿ ಯೋಜನೆಗಳು ರಾಜ್ಯದ 4.60 ಕೋಟಿ ಜನರನ್ನು ತಲುಪುತ್ತಿದೆ. ಸರಕಾರ ಎಂದರೆ ಕೇವಲ ರಸ್ತೆ, ಸೇತುವೆಯಂತಹ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮಾತ್ರವಲ್ಲ. ಬಡವರು, ಮಹಿಳೆಯರು, ರೈತರು ಸೇರಿ ಶ್ರಮಿಕ ವರ್ಗವನ್ನೂ ಆರ್ಥಿಕವಾಗಿ ಸಶಕ್ತರನ್ನಾಗಿಸಿ, ಸರ್ವರ ಸರ್ವತೋಮುಖ ಅಭಿವೃದ್ಧಿ ಮಾಡುವುದೆಂಬ ವಿಭಿನ್ನ ಆಶಯದೊಂದಿಗೆ ಸರಕಾರ ಮುಂದಡಿ ಇಟ್ಟಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ವಿಶ್ವದಲ್ಲೇ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕೇವಲ ಭರವಸೆ ಕೊಡದೆ, ಗ್ಯಾರಂಟಿ ಕಾರ್ಡ್‍ಗಳ ಮೂಲಕ ಜನರಿಗೆ ವಿಶ್ವಾಸ ಮೂಡಿಸಿತ್ತು. ಬಹುಮತದ ಜನಾಶಯ ಪಡೆದ ನಂತರ ಸುಮ್ಮನೆ ಕೂರದೇ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರಕಾರದ ಅಕ್ಕಿ ಕೊಡದೇ ಅಸಹಕಾರ ನೀಡಿದಾಗಲೂ ಜನರ ಬ್ಯಾಂಕ್ ಖಾತೆಗೆ ಹಣ ಹಾಕುವ ಮೂಲಕ ನುಡಿದಂತೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನೇರ ನಗದು ವರ್ಗಾವಣೆ ಮೂಲಕ ಕೋಟ್ಯಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ತಲುಪಿಸಿ, ದೊಡ್ಡ ಕ್ರಾಂತಿಯನ್ನೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ಬಡಜನರ ಕೊಳ್ಳುವ ಶಕ್ತಿ ಹೆಚ್ಚಿದೆ. ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಔಷದೋಪಚಾರಕ್ಕೆ ನೆರವಾಗಿದೆ. ರಾಜ್ಯದ ಪ್ರವಾಸೋದ್ಯಮ ಚಟುವಟಿಕೆ ಚುರುಕಾಗಿದೆ. ಒಟ್ಟಿನಲ್ಲಿ ಸರಕಾರ ‘ಜನರಿಂದ ಜನರಿಗಾಗಿ’ ಎಂಬ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಈಡೇರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

223 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಕೇಂದ್ರ ಸರಕಾರ ಬರ ಪರಿಹಾರ ನೀಡಲು ವಿಳಂಬ ಮಾಡಿ, ಅಸಹಕಾರ ತೋರಿದಾಗಲೂ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾದವು. ಜನರು ತೊಂದರೆ ಇಲ್ಲದೇ ಜೀವನ ಮಾಡಲು ರಾಜ್ಯ ಸರಕಾರ ತನ್ನ ಯೋಜನೆಗಳ ಮೂಲಕ ಅನುವು ಮಾಡಿಕೊಟ್ಟಿತು. ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡಿದ ಸರಕಾರದ ನಡೆ ಶ್ಲಾಘನೀಯ. ಈ ವೇಳೆ ರೈತರ ಖಾತೆಗೆ 2 ಸಾವಿರ ರೂ.ಗಳನ್ನು ಸರಕಾರ ಜಮೆ ಮಾಡಿ ರೈತಪರ ಸರಕಾರ ಎಂಬುದನ್ನು ಸಾಬೀತು ಮಾಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕ್ರಾಂತಿಕಾರಿ ಹೆಜ್ಜೆಗಳಿಂದ ಒಂದು ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ ಸರಕಾರ ಮುಂದಿನ ನಾಲ್ಕು ವರ್ಷಗಳನ್ನು ಸಮರ್ಥವಾಗಿ ಎದುರಿಸಲಿದೆ. ಮಾತ್ರವಲ್ಲ, ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಿ, ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವನ್ನು ಸೃಷ್ಟಿ ಮಾಡಲಿದೆ ಎಂಬ ದೃಢ ವಿಶ್ವಾಸವಿದೆ. ವರ್ಷದಲ್ಲಿ ಕೋಟ್ಯಂತರ ಜನರ ಹರ್ಷಕ್ಕೆ ಕಾರಣವಾದ ಸರಕಾರಕ್ಕೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅಭಿನಂದನೆ ಸಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News