‘2014-15ನೇ ಸಾಲಿನ ಗಣತಿಯ ಅಧ್ಯಯನ ವರದಿ’ ನಾಳೆ (ಫೆ.29) ಸರಕಾರಕ್ಕೆ ಸಲ್ಲಿಕೆ
ಉಡುಪಿ: ಬಹುಕಾಲದ ನಿರೀಕ್ಷೆಯ ಬಳಿಕ ಕೆ.ಜಯಪ್ರಕಾಶ್ ಅಧ್ಯಕ್ಷತೆಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ ‘2014-15ನೇ ಸಾಲಿನ ಗಣತಿಯ ಅಧ್ಯಯನ ವರದಿ’(ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015) ಯನ್ನು ಗುರುವಾರ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿವೆ.
ವರದಿ ಸಲ್ಲಿಕೆಗೆ ಮುಖ್ಯಮಂತ್ರಿ ಕಚೇರಿಯಿಂದ ಸಮಯಾವಕಾಶವನ್ನು ಕೋರಿದ್ದು, ನಾಳೆ ಬೆಳಗ್ಗೆ ಇಲ್ಲವೇ ಅಪರಾಹ್ನ 300ರಿಂದ 400 ಪುಟಗಳಷ್ಟಿರುವ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಮೂಲ ತಿಳಿಸಿದೆ. ಆಯೋಗದ ಕಡೆಯಿಂದ ಎಲ್ಲಾ ಕಾರ್ಯಗಳು ಮುಗಿದಿವೆ, ವರದಿ ಸಲ್ಲಿಕೆಯೊಂದು ಮಾತ್ರ ಬಾಕಿ ಉಳಿದಿದೆ ಎಂದು ಅದು ಹೇಳಿದೆ.
ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಉಳಿದ ಸದಸ್ಯರೊಂದಿಗೆ ಆಯೋಗದ ಸದಸ್ಯ ಕಾರ್ಯದರ್ಶಿ ಅವರು ಭದ್ರವಾಗಿ ಪ್ಯಾಕ್ ಮಾಡಿದ ವರದಿಯ ಪ್ರತಿಗಳನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಇಲಾಖೆ ಸಚಿವರಿಗೆ ಹಸ್ತಾಂತರಿಸಲಿದ್ದಾರೆ ಎಂದೂ ಮೂಲಗಳು ‘ವಾರ್ತಾಭಾರತಿ’ಗೆ ತಿಳಿಸಿವೆ.
ವರದಿಯನ್ನು ಸಿದ್ಧಪಡಿಸುವ ಸಲುವಾಗಿಯೇ ಎರಡು ಬಾರಿ ವಿಸ್ತರಣೆಗೊಂಡ ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಾವಧಿ ನಾಳೆ (ಫೆ.29)ಕ್ಕೆ ಮುಕ್ತಾಯಗೊಳ್ಳಲಿದೆ. ಅನಂತರ ಹೆಗ್ಡೆ ಅವರ ಮುಂದಿನ ಯೋಜನೆಯೂ ಬಹಿರಂಗಗೊಳ್ಳುವ ಸಾಧ್ಯತೆ ಇದೆ.