ರಾಜ್ಯದಲ್ಲಿ ಬೀರ್ ಇದೆ, ನೀರಿಲ್ಲ ಎಂಬ ಸ್ಥಿತಿಯನ್ನು ಸರಕಾರ ಸೃಷ್ಟಿಸಿದೆ: ಆರ್. ಅಶೋಕ್ ಟೀಕೆ
ಬೆಂಗಳೂರು: ಯಾವುದೇ ಖಾಸಗಿ ಕೊಳವೆಬಾವಿಯನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಅದನ್ನು ಮಾಡಲು ರಾಜ್ಯ ಸರಕಾರಕ್ಕೆ ಮನಸ್ಸಿಲ್ಲದಿರುವುದರಿಂದ ಖಾಸಗಿ ಟ್ಯಾಂಕರ್ ಗಳು ಕೃತಕವಾಗಿ ನೀರಿನ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ತೊಡಗಿವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಮಾತನಾಡಿದ ಅವರು, ‘ಕಲುಷಿತ ನೀರನ್ನು ಜನರಿಗೆ ನೀಡುತ್ತಿದ್ದರೂ ಆರೋಗ್ಯ ಇಲಾಖೆ ಏನೂ ಕ್ರಮ ಕೈಗೊಳ್ಳದೆ ಸತ್ತುಹೋಗಿದೆ. ಎಲ್ಲಿಯೂ ತಪಾಸಣೆ ಮಾಡುತ್ತಿಲ್ಲ. ಯಾವ ಬೋರ್‍ವೆಲ್‍ನಲ್ಲಿ ಎಷ್ಟು ಕಲುಷಿತ ಅಂಶ ಇದೆ ಎಂಬುದನ್ನು ತಪಾಸಣೆ ಮಾಡುತ್ತಿಲ್ಲ ಎಂದು ದೂರಿದರು.
ಜನರು ಬಿಂದಿಗೆ ಹಿಡಿದುಕೊಂಡು ರಸ್ತೆಗೆ ಬಂದಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರಕಾರ ಹೆಚ್ಚುವರಿ ನೀರನ್ನು ಪಂಪ್ ಮಾಡಬೇಕು. ಖಾಸಗಿ ಬೋರ್‍ವೆಲ್‍ಗಳನ್ನು ಬಿಬಿಎಂಪಿ ವಶಕ್ಕೆ ಪಡೆದು ಕ್ರಮ ವಹಿಸಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಒಂದು ಕಡೆ ಬಾಂಬ್ ಭೀತಿ, ಮತ್ತೊಂದು ಕಡೆ ನೀರಿನ ಆತಂಕವಿದೆ ಎಂದು ಅವರು ಟೀಕಿಸಿದರು.
ಬೀರ್ ಇದೆ, ನೀರಿಲ್ಲ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಲ್ಲಿ ನೋಡಿದರೂ ಮದ್ಯದ (ಎಣ್ಣೆ) ಅಂಗಡಿಗಳು ತೆರೆದಿರುತ್ತವೆ. ಆದರೆ, ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿವೆ. ರಾಜ್ಯದಲ್ಲಿ ಬೀರ್ ಇದೆ, ನೀರಿಲ್ಲ ಎಂಬ ಸ್ಥಿತಿಯನ್ನು ಸರಕಾರ ಸೃಷ್ಟಿಸಿದೆ ಎಂದು ಆರ್.ಅಶೋಕ್ ಇದೇ ವೇಳೆ ವಾಗ್ದಾಳಿ ನಡೆಸಿದರು.