ರಾಜ್ಯ ಬಜೆಟ್‌ 2024 : ಮದ್ಯದ ಬೆಲೆ ಏರಿಸಲು ರಾಜ್ಯ ಸರಕಾರ ನಿರ್ಧಾರ

Update: 2024-02-16 08:54 GMT

 Photo: ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು  2024-25ನೇ ಸಾಲಿನ ಆಯವ್ಯಯದಲ್ಲಿ ಮದ್ಯದ ಘೋಷಿತ ಸ್ಲಾಬ್‍ಗಳನ್ನು(ಬೆಲೆ)ಯನ್ನು ಏರಿಕೆ ಮಾಡುವ ಮುನ್ಸೂಚನೆಯನ್ನು ತಮ್ಮ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ 2024-25ನೆ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ, ‘ವಾಣಿಜ್ಯ ತೆರಿಗೆ, ನೋಂದಣಿ ಮುದ್ರಾಂಕ, ಅಬಕಾರಿ, ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ ಸೇರಿ ಸಂಪನ್ಮೂಲ ಸಂಗ್ರಹ ಇಲಾಖೆಗಳಿಂದ ಒಟ್ಟು 1,96,525 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗುತ್ತಿದೆ’ ಎಂದು ಪ್ರಕಟಿದರು.

ಮದ್ಯದ ಘೋಷಿತ ಸ್ಲಾಬ್‍ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯದ ಮದ್ಯದ ಬೆಳವಣಿಗೆಗೆ ಅನುಗುಣವಾಗಿ ದೇಶೀಯವಾಗಿ ತಯಾರಾಗುವ ಮದ್ಯ (ಐಎಂಎಲ್) ಮತ್ತು ಬಿಯರ್ ನ ಸ್ಲಾಬ್‍ಗಳನ್ನು ಪರಿಷ್ಕರಣೆ ಮಾಡಲಾಗುವುದು. ನೆರೆ ರಾಜ್ಯಗಳಲ್ಲಿ ಕೆಲವು ಮದ್ಯ ಮಾರಾಟ ದರ ರಾಜ್ಯಕ್ಕಿಂತಲೂ ದುಬಾರಿಯಾಗಿದೆ. ಪರಿಷ್ಕರಣೆಗೊಂಡರೆ ಸಹಜವಾಗಿಯೇ ಅದು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಪ್ರಸಕ್ತ ವರ್ಷ ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನಗಳ ತೆರಿಗೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಈ ಬಜೆಟ್‍ನಲ್ಲಿ ಅಬಕಾರಿ ಹೊರತುಪಡಿಸಿ ಬೇರೆ ತೆರಿಗೆ ಹೊರೆ ಕಂಡುಬಂದಿಲ್ಲ. ಅಬಕಾರಿ ಇಲಾಖೆಯ ಎಲ್ಲ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇಲಾಖೆ ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿ ನಿಗದಿಪಡಿಸುವುದು, ಸ್ವಯಂಚಾಲಿತ ಅನುಮೋದನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

2024ರ ಜನವರಿ ಅಂತ್ಯದ ವರೆಗೆ ಅಬಕಾರಿ ಇಲಾಖೆಯಿಂದ 28,181 ಕೋಟಿ ರೂ.ಆದಾಯ ಸಂಗ್ರಹವಾಗಿದ್ದು, ಮುಂದಿನ ವರ್ಷ 38,225 ಕೋಟಿ ರೂ.ಗಳ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಅಲ್ಲದೆ, ಆದಾಯದ ಪ್ರಮುಖ ಮೂಲವಾಗಿರುವ ಸರಕು ಮತ್ತು ಸೇವಾ ತೆರಿಗೆಯಲ್ಲಿ 2024-25ನೆ ಸಾಲಿಗೆ 1.10ಲಕ್ಷ ಕೋಟಿ ರೂ.ಗಳ ಸಂಗ್ರಹದ ಗುರಿಯನ್ನು ನಿಗದಿ ಮಾಡಲಾಗಿದೆ ಎಂದರು.

2024ರ ಜನವರಿ ಅಂತ್ಯದ ವರೆಗೂ 58,180 ಕೋಟಿ ರೂ.ಗಳ ಎಸ್‍ಜಿಎಸ್‍ಟಿ ಸ್ವೀಕೃತವಾಗಿದ್ದು, ಕಳೆದ ವರ್ಷಕ್ಕಿಂತಲೂ ಶೇ.14ರಷ್ಟು ಬೆಳವಣಿಗೆಯಾಗಿದೆ. ಪ್ರಸಕ್ತ ವರ್ಷ ಜಿಎಸ್‌ಟಿ ಮೇಲ್ಮನವಿ ನ್ಯಾಯ ಮಂಡಳಿಯ 2 ರಾಜ್ಯ ಪೀಠಗಳನ್ನು ರಚಿಸಿ ಕಾರ್ಯಗತಗೊಳಿಸುವ ಮೂಲಕ ತೆರಿಗೆ ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸಲು ಆದ್ಯತೆ ನೀಡಲಾಗಿದೆ ಎಂದು ಅವರು ವಿವರ ನೀಡಿದರು.

ಗ್ರಾಹಕ ಸಂವೇದಿ ಜಿಎಸ್‍ಟಿ ಡೇಟಾ ಬೇಸ್ ಮ್ಯಾನೇಜ್‍ಮೆಂಟ್ ಮತ್ತು ಕೃತಕ ಬುದ್ದಿಮತ್ತ ಚಾಲಿತ ವಿಶ್ಲೇಷಣಾತ್ಮಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ನಿಖರ ಮಾಹಿತಿ ಮುನ್ಸೂಚಕ ವಿಶ್ಲೇಷಣೆ ಮೂಲಕ ರಾಜಸ್ವ ಕ್ರೂಢೀಕರಣಕ್ಕೆ ಸಹಾಯ ಮಾಡಲಾಗುವುದು. ವಾಣಿಜ್ಯ ತೆರಿಗೆ ಇಲಾಖೆಯ ಅಕಾರಿಗಳ ಪರಿಣಿತಿ ಹೆಚ್ಚಿಸಲು ಇ-ತರಬೇತಿ ನೀಡಿ ಮೋಸದ ನೋಂದಣಿಗಳನ್ನು ಪತ್ತೆ ಹಚ್ಚುವುದು ಹಾಗೂ ರಾಜಸ್ವ ಸೃಜನೆಗೆ ಹೊಸ ಮಾರ್ಗಗಳನ್ನು ಅನ್ವೇಷಿಸಲು ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ 26ಸಾವಿರ ಕೋಟಿ ರೂ.ಆದಾಯ ಸಂಗ್ರಹಿಸುವ ಗುರಿ ನಿಗದಿಪಡಿಸಿದ್ದು, ಈಗಾಗಲೇ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಜನವರಿ ಅಂತ್ಯದ ವರೆಗೆ 15,692ಕೋಟಿ ರೂ.ರಾಜಸ್ವ ಸಂಗ್ರಹಣೆಯಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.10ರಷ್ಟು ಬೆಳವಣಿಗೆಯಾಗಿದೆ.

2023-24ನೆ ಸಾಲಿನಲ್ಲಿ ಕರ್ನಾಟಕ ಮೋಟಾರು ವಾಹನ ತೆರಿಗೆಯನ್ನು ಪರಿಷ್ಕರಣೆ ಮಾಡಿರುವುದರಿಂದ ಜನವರಿ ಅಂತ್ಯದ ವರೆಗೆ 9,333 ಕೋಟಿ ರೂ.ಸಂಗ್ರಹವಾಗಿದ್ದು, ಹಿಂದಿನ ಸಾಲಿಗಿಂತಲೂ ಶೇ.19ರಷ್ಟು ಬೆಳವಣಿಗೆಯಾಗಿದೆ. ಮುಂದಿನ ವರ್ಷಕ್ಕೆ 13ಸಾವಿರ ಕೋಟಿ ರೂ.ಆದಾಯದ ಗುರಿ ನಿಗದಿ ಮಾಡಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಶೇ.22ರಷ್ಟು ಆದಾಯ ಹೆಚ್ಚಳವಾಗಿದೆ. ಜನವರಿ ಅಂತ್ಯಕ್ಕೆ 5,658 ಕೋಟಿ ರೂ. ಸಂಗ್ರಹವಾಗಿದ್ದು, ಮುಂದಿನ ವರ್ಷಕ್ಕೆ 9ಸಾವಿರ ಕೋಟಿ ರೂ.ನಿಗದಿಪಡಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News