ವಿದ್ಯುತ್ ದರ ಇಳಿಕೆ ಮಾಡಿ ರಾಜ್ಯ ಸರಕಾರ ಆದೇಶ

Update: 2024-02-28 15:17 GMT

ಬೆಂಗಳೂರು: ಲೋಕಸಭೆ ಚುನಾವಣೆಯ ಬೆನ್ನಲ್ಲೆ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿರುವ ರಾಜ್ಯ ಸರಕಾರವು, ಪ್ರತಿ ತಿಂಗಳು 100 ಯೂನಿಟ್‍ಗಳಿಗಿಂತ ಹೆಚ್ಚಿನ ವಾಣಿಜ್ಯ, ಕೈಗಾರಿಕಾ ಮತ್ತು ಗೃಹ ಬಳಕೆ ವಿದ್ಯುತ್ ದರವನ್ನು ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಪರಿಷೃತ ದರಗಳು ಪ್ರಸಕ್ತ ಸಾಲಿನ ಎಪ್ರಿಲ್ 1ರಿಂದ ಜಾರಿಗೆ ಬರುತ್ತವೆ.

2024-25ನೆ ಸಾಲಿನ ವಿದ್ಯುಚ್ಛಕ್ತಿ ದರ ಪರಿಷ್ಕರಣೆ ಮಾಡಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್ ಸಿ)ವು ಗೃಹ ಬಳಕೆ ವಿದ್ಯುತ್ ದೀಪ-100 ಯೂನಿಟ್ ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‍ಗೆ 1 ರೂಪಾಯಿ 10 ಪೈಸೆ ಇಳಿಕೆ. ವಾಣಿಜ್ಯ-ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‍ಗೆ 1 ರೂಪಾಯಿ 25 ಪೈಸೆ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ.ಇಳಿಕೆ ಮಾಡಲಾಗಿದೆ.

ಕೈಗಾರಿಕೆ-ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‍ಗೆ 50 ಪೈಸೆ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ., ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‍ಗೆ 40 ಪೈಸೆ, ಡಿಮಾಂಡ್ ಶುಲ್ಕ ಪ್ರತಿ ಕೆವಿಎಗೆ 10 ರೂ., ಖಾಸಗಿ ಏತ ನೀರಾವರಿ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‍ಗೆ 2 ರೂ. ಇಳಿಕೆ ಮಾಡಲಾಗಿದೆ.

ನಿವಾಸ ಅಪಾರ್ಟ್‍ಮೆಂಟ್‍ಗಳ ಇಂಧನ ಬಳಕೆ ಶುಲ್ಕ ಪ್ರತಿ ಕೆವಿಎಗೆ ಡಿಮಾಂಡ್ ಶುಲ್ಕವನ್ನು 10 ರೂ., ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‍ಗೆ 50 ಪೈಸೆ ಇಳಿಕೆ, ಕೈಗಾರಿಕಾ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‍ಗೆ 1 ರೂ.ಇಳಿಕೆ ಮಾಡಲಾಗಿದೆ.

ವಾಣಿಜ್ಯ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯೂನಿಟ್‍ಗೆ 50 ಪೈಸೆ ಇಳಿಕೆ ಮಾಡಲಾಗಿದ್ದು, ಈ ಚಾಲ್ತಿಯಲ್ಲಿರುವ ಸಂಜೆ 6 ರಿಂದ ರಾತ್ರಿ 10ರವರೆಗಿನ ಗರಿಷ್ಠ ಬೇಡಿಕೆಗೆ ಸಮಯಾಧಿರಿತ ದರ(ಟಿಒಡಿ)ವನ್ನು ಬೆಳಗ್ಗೆ 6 ರಿಂದ 9 ಗಂಟೆಯವರೆಗಿನ ಗರಿಷ್ಠ ಬೇಡಿಕೆಗೂ ಪ್ರಾರಂಭಿಸಲಾಗಿದೆ. ಪ್ರೋತ್ಸಾಹಕ ದರವನ್ನು ಪ್ರತಿ ಯೂನಿಟ್‍ಗೆ 2 ರೂ.ಗಳಿಂದ 1 ರೂ.ಗಳಿಗೆ ಇಳಿಸಿ ವಿಶೇಷ ಪ್ರೋತ್ಸಾಹ ಯೋಜನೆ(ಎಸ್‍ಐಎಸ್) ಅನ್ನು ಆರ್ಥಿಕ ವರ್ಷ 2025ಕ್ಕೆ ಮುಂದುವರೆಸಿದೆ. ಆರ್ಥಿಕ ವರ್ಷ 2026ರಿಂದ ಈ ಯೋಜನೆಯು ಮುಂದುವರೆಯುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕ್ರಾಸ್ ಸಬ್ಸಿಡಿ ಶುಲ್ಕಗಳನ್ನು ಕಡಿಮೆ ಮಾಡಲಾಗಿದೆ. ಮಾಪಕವನ್ನು ಸ್ವಯಂ ಓದುವುದನ್ನು ಎಲ್ಲ ಎಲ್.ಟಿ.ಸ್ಥಾವರಗಳಿಗೆ ಐಚ್ಛಿಕವಾಗಿ ಪರಿಚಯಿಸಲಾಗಿದೆ. ಇಂಧನ ಬಳಕೆ ಶುಲ್ಕಗಳಿಗೆ ಒಂದೇ ಸ್ಲ್ಯಾಬ್(ಹಂತ) ಪರಿಚಯಿಸಿರುವುದರಿಂದ ಎಲ್.ಟಿ.ಗ್ರಾಹಕರು ತಮ್ಮ ಆವರಣದಲ್ಲಿ ಒಂದಕ್ಕಿಂತ ಹೆಚ್ಚಿನ ಸ್ಥಾವರಗಳಿಗೆ ವಿದ್ಯುಚ್ಛಕ್ತಿ ಪಡೆಯಬಹುದಾಗಿದೆ.

ವಿದ್ಯುತ್ ಸರಬರಾಜು ಕಂಪೆನಿಗಳು 2024-25ನೆ ಆರ್ಥಿಕ ವರ್ಷಕ್ಕೆ ಒಟ್ಟು 69,474.75 ಕೋಟಿ ರೂ.ಗಳ ವಾರ್ಷಿಕ ಆದಾಯ ಅಗತ್ಯತೆ(ಎಆರ್‌ ಆರ್)ಯನ್ನು ಅನುಮೋದಿಸುವಂತೆ ಕೆಇಆರ್‌ ಸಿಗೆ ಕೋರಿದ್ದವು. ಈ ಮೊತ್ತವು 4,863.85 ಕೋಟಿ ರೂ.ಗಳ ಆದಾಯದಲ್ಲಿನ ಕೊರತೆಯನ್ನು ಒಳಗೊಂಡಿದೆ. ವಿದ್ಯುತ್ ಸರಬರಾಜು ಕಂಪೆನಿಗಳು ಈ ಆದಾಯದ ಕೊರತೆಯನ್ನು ಸರಿದೂಗಿಸಲು ಪ್ರತಿ ಯೂನಿಟ್‍ಗೆ ಸರಾಸರಿ 66 ಪೈಸೆಗಳಷ್ಟು ಹೆಚ್ಚಿಸುವಂತೆ ಕೋರಿದ್ದವು.

ಇತರೆ ಕ್ರಮಗಳು: ಎಲ್.ಟಿ.ಕೈಗಾರಿಕೆಗಳಿಗೆ ದರ ಇಳಿಕೆಯಾಗಿರುವುದರಿಂದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತಿ ಯೂನಿಟ್‍ಗೆ 50 ಪೈಸೆ ರಿಯಾಯಿತಿಯನ್ನು ಮುಂದುವರೆಸಿಲ್ಲ. ಹಿಂದಿನ ಆದೇಶದಲ್ಲಿ ನಗರ ಮತ್ತು ಗ್ರಾಮೀಣ ಪ್ರವರ್ಗಗಳನ್ನು ಒಂದೇ ಪ್ರವರ್ಗಕ್ಕೆ ವಿಲೀನಗೊಳಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್.ಟಿ.ವಾಣಿಜ್ಯ, ಎಲ್.ಟಿ.ಕೈಗಾರಿಕೆ, ಎಲ್.ಟಿ.ಖಾಸಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಪ್ರತಿ ಯೂನಿಟ್‍ಗೆ 30 ಪೈಸೆ ರಿಯಾಯಿತಿ ಅನುಮತಿಸಲಾಗಿದೆ.

2024-25ನೆ ಆರ್ಥಿಕ ವರ್ಷಕ್ಕೆ ಕೆಪಿಟಿಸಿಎಲ್‍ನ 6,148.26 ಕೋಟಿ ರೂ., ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ 340.40 ಕೋಟಿ ರೂ., ಮಂಗಳೂರು ಎಸ್‍ಇಝೆಡ್‍ಗಾಗಿ 66.954 ಕೋಟಿ ರೂ. ಹಾಗೂ ಏಕಸ್ ಎಸ್‍ಇಝೆಡ್‍ಗೆ 27.154 ಕೋಟಿ ರೂ.ಗಳ ಪರಿಷ್ಕೃತ ಕಂದಾಯ ಅಗತ್ಯತೆಯನ್ನು ಕೆಇಆರ್‌ ಸಿ ಅನುಮೋದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News