ಕೇಂದ್ರದ ಕೃಷಿ ಸಾಲ ಕಡಿತದ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯ ಸರಕಾರ ಸಜ್ಜು!

Update: 2024-11-19 14:29 GMT

ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು : ಕೃಷಿ ಸಾಲಗಳಿಗಾಗಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನೀಡಲಾಗುವ ಆರ್ಥಿಕ ಸಾಲ ಸೌಲಭ್ಯದಲ್ಲಿ ಕಡಿತವಾಗಿರುವುದನ್ನು ವಿರೋಧಿಸಿ ಕಾನೂನು ಹೋರಾಟ ನಡೆಸಲು ರಾಜ್ಯ ಸರಕಾರ ಸಜ್ಜಾಗಿದೆ.

ಮಂಗಳವಾರ ವಿಧಾನಸೌಧದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಕೃಷಿ ಸಾಲದ ಬಾಬ್ತಿನಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಕುರಿತಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟು ಹೋರಾಟ ನಡೆಸುವುದಾಗಿ ಸಚಿವರು ತಿಳಿಸಿದರು.

ಈ ವೇಳೆ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಕಳೆದ ಬಾರಿ 5,600 ಕೋಟಿ ರೂ.ಕೃಷಿ ಕ್ಷೇತ್ರಕ್ಕೆ ಸಾಲ ನೀಡಲಾಗಿತ್ತು. ಈ ಬಾರಿ 2,340 ಕೋಟಿ ರೂ.ಗಳನ್ನು ಮಾತ್ರ ಒದಗಿಸಲಾಗಿದೆ. ಶೇ.58ರಷ್ಟು ಕೃಷಿ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ ಎಂದು ಆರೋಪಿಸಿದರು.

ಗ್ರಾಮೀಣ ಭಾಗದಲ್ಲಿ ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ರಿಯಾಯಿತಿ ಬಡ್ಡಿದರದ ಸಾಲಸೌಲಭ್ಯ ನೀಡಲಾಗುತ್ತಿದೆ. ಇದಕ್ಕಾಗಿ ನಬಾರ್ಡ್ ರಾಜ್ಯ ಸರಕಾರಕ್ಕೆ ಶೇ.4.5ರ ಬಡ್ಡಿದರದಲ್ಲಿ ಸಾಲ ರೂಪದ ಆರ್ಥಿಕ ನೆರವು ನೀಡುತ್ತಿತ್ತು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಮತ್ತು ರಿಯಾಯಿತಿ ಬಡ್ಡಿದರದಲ್ಲಿ ಸಾಲ ನೀಡಿ ಕೃಷಿ ಚಟುವಟಿಕೆಗಳನ್ನು ಬಲವರ್ಧನೆಗೊಳಿಸಲಾಗುತ್ತಿತ್ತು ಎಂದು ಕೆ.ಎನ್.ರಾಜಣ್ಣ ವಿವರಿಸಿದರು.

ರಾಜ್ಯ ಸರಕಾರ ಮನವಿ ಸಲ್ಲಿಸಿದ ಹೊರತಾಗಿಯೂ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಬಾರ್ಡ್‍ನ ಈ ಕ್ರಮದಿಂದ ರೈತರಿಗೆ ಕೃಷಿ ಸಾಲ ನೀಡಲು ಕಷ್ಟವಾಗುತ್ತಿದೆ. ಸಹಕಾರ ವ್ಯವಸ್ಥೆಯಲ್ಲಿ ಸಾಲ ದೊರೆಯದೇ ಇದ್ದರೆ ರೈತರು ಖಾಸಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ ಹಾಗೂ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಕೆ.ಎನ್.ರಾಜಣ್ಣ ಎಚ್ಚರಿಸಿದರು.

ರಾಜ್ಯ ಸರಕಾರ 25 ಸಾವಿರ ಕೋಟಿ ರೂ.ಗಳನ್ನು ರೈತರಿಗೆ ಸಾಲದ ರೂಪದಲ್ಲಿ ನೀಡಿದೆ. ನಬಾರ್ಡ್‍ನ ಬಡ್ಡಿದರ ಹೆಚ್ಚಿದ್ದಾಗಿಯೂ ನಾವು ಅದರ ಹೊರೆಯನ್ನು ಭರಿಸುತ್ತಿದ್ದೇವೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವರು ರಾಜ್ಯದ ನೆರವಿಗೆ ಬರುತ್ತಿಲ್ಲ, ಕೇಂದ್ರದ ತೀರ್ಮಾನಗಳು ರಾಜ್ಯಕ್ಕೆ ಮಾರಕವಾಗುತ್ತಿವೆ ಎಂದು ಕೆ.ಎನ್.ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದರು.

ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ನಿಧಿಯಡಿ ನೀಡುವ ನೆರವನ್ನೂ ಕಡಿತ ಮಾಡಲಾಗಿದೆ. ಬರ ಹಾಗೂ ನೆರೆ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರು ಸಾಲಮನ್ನಾ ಮಾಡಿ ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ ಕೇಂದ್ರದ ಅಸಹಕಾರದಿಂದ ಸಾಲ ನೀಡುವುದೇ ಕಷ್ಟವಾಗುತ್ತಿದೆ ಎಂದು ಕೆ.ಎನ್.ರಾಜಣ್ಣ ವಿಷಾದಿಸಿದರು.

ಸಚಿವ ಚಲುವರಾಯಸ್ವಾಮಿ ಮಾತನಾಡಿ, ರಾಜ್ಯ ಸರಕಾರ 2 ಲಕ್ಷ ರೂ.ಗಳವರೆಗೂ ಶೂನ್ಯ ಬಡ್ಡಿದರದಲ್ಲಿ ಅನಂತರ ರಿಯಾಯಿತಿ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುತ್ತಿದೆ. ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ. ರೈತರ ಆದಾಯ ನೋಡಿ ಸಾಲ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ಹಿಂದೆ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು. ಈಗ ಕೃಷಿ ಸಾಲದ ವಿಚಾರವಾಗಿಯೂ ನ್ಯಾಯಾಂಗ ಹೋರಾಟ ನಡೆಸಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ಸಿಎಂ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆಯಿಲ್ಲ: ‘ರೈತರ ನೆರವಿಗೆ ಧಾವಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಪತ್ರ ಬರೆದಿದ್ದೇವೆ. ಅಲ್ಲಿಂದ ಉತ್ತರ ಬರೆದಿದ್ದು, ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಲಾಗಿದೆ. ರಾಜ್ಯದ ಸಂಸದರು ಈ ಬಗ್ಗೆ ದನಿ ಎತ್ತಬೇಕು ಎಂದು ನಾವು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಅಲ್ಲಿಂದ ಸಕಾರಾತ್ಮಕ ಸ್ಪಂದನೆಗಳಿಲ್ಲ’ ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ರಾಜ್ಯದಿಂದ ಹೋದವರು ಬಾಯಿ ಬಿಡುತ್ತಿಲ್ಲ: ನಬಾರ್ಡ್‍ನಿಂದ 2023-24ರಲ್ಲಿ 5,600 ಕೋಟಿ ರೂ. ಸಾಲ ಸೌಲಭ್ಯ ಸಿಕ್ಕಿತ್ತು. ಈಗ 2024-25ನೇ ಸಾಲಿಗೆ 2,300 ರೂ. ಮಾತ್ರ ಸಾಲ ದೊರೆತಿದೆ. ರಾಜ್ಯದಿಂದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಮತ್ತು ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಇದರ ಬಗ್ಗೆ ಯಾರೂ ಬಾಯಿ ಬಿಡುತ್ತಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News