ಹೈಕೋರ್ಟ್ ತೀರ್ಪಿನಲ್ಲಿ ಕಾನೂನಾತ್ಮಕ ಲೋಪದೋಷಗಳಿವೆ : ಎ.ಎಸ್.ಪೊನ್ನಣ್ಣ
ಬೆಂಗಳೂರು : ‘ನ್ಯಾಯಾಲಯದ ತೀರ್ಪಿನ ಬಗ್ಗೆ ಅಧ್ಯಯನ ಮಾಡಿದ್ದೇವೆ. ಕಾನೂನಾತ್ಮಕ ಲೋಪದೋಷಗಳಿವೆ ಎಂಬುದು ಗೊತ್ತಾಗಿದೆ’ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನ್ಯಾಯಮೂರ್ತಿಗಳು ಪ್ರಕರಣದಲ್ಲಿ ಸಿಎಂ ಪಾತ್ರ ಏನು ಎಂದು ಕೇಳಿದ್ದರು. ಅದಕ್ಕೆ ತೀರ್ಪಿನಲ್ಲೂ ಉತ್ತರವಿಲ್ಲ, ಯಾರೂ ಮುಖ್ಯಮಂತ್ರಿ ಪಾತ್ರದ ಬಗ್ಗೆ ತೋರಿಸಲು ಆಗಿಲ್ಲ. ರಾಜಕೀಯ ಪ್ರೇರಿತ ಪ್ರಕರಣ ಇದು. ತನಿಖೆಗೆ ನಮ್ಮದೇನೂ ಅಭ್ಯಂತರವಿಲ್ಲʼ ಎಂದು ವಿವರಣೆ ನೀಡಿದರು.
ಹೊಸದಿಲ್ಲಿಯ ವಕೀಲರ ಅಭಿಪ್ರಾಯ ಕೂಡ ಪಡೆದುಕೊಂಡಿದ್ದೇವೆ. ತೀರ್ಪಿನಲ್ಲಿಯೇ ಹಲವು ಲೋಪದೋಷಗಳಿವೆ. ನಾವು ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆದರೆ, ಯಾವಾಗ ಮೇಲ್ಮನವಿ ಸಲ್ಲಿಸಬೇಕು ಅಂತ ಇನ್ನೂ ತೀರ್ಮಾನ ಮಾಡಿಲ್ಲ ಎಂದು ಎ.ಎಸ್.ಪೊನ್ನಣ್ಣ ಹೇಳಿದರು.
ಹೈಕೋರ್ಟ್‍ನ ಏಕಸದಸ್ಯ ಪೀಠ ಹೇಳಿದ್ದೇ ಅಂತಿಮ ಅಲ್ಲ. ಸುಪ್ರಿಂಕೋರ್ಟ್ ತೀರ್ಪು ನೀಡಿದರೆ ಮಾತ್ರ ಅದು ಕಾನೂನು ಆಗುತ್ತದೆ. ಇಲ್ಲದಿದ್ದರೆ ಅದನ್ನು ಅಂತಿಮ ಎಂದು ತೀರ್ಮಾನಿಸಲಾಗುವುದಿಲ್ಲ ಎಂದು ಎ.ಎಸ್.ಪೊನ್ನಣ್ಣ ವಿಶ್ಲೇಷಿಸಿದರು.