‘ಜಾತಿಗೊಬ್ಬ ಡಿಸಿಎಂ’ ಅಭಿಪ್ರಾಯ ಹೇಳಲು ಪಕ್ಷದಲ್ಲಿ ಆಂತರಿಕ ಸ್ವಾತಂತ್ರ್ಯವಿದೆ: ಸಚಿವ ಪ್ರಿಯಾಂಕ್ ಖರ್ಗೆ

Update: 2024-01-06 14:40 GMT

ಕಲಬುರಗಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯ ಸರಕಾರದ ಸಚಿವರ ನಡುವೆ ಪುನಃ ‘ಜಾತಿಗೊಬ್ಬ ಡಿಸಿಎಂ’ ನೇಮಿಸುವ ಕುರಿತಂತೆ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹೇಳಲು ಪಕ್ಷದಲ್ಲಿ ಆಂತರಿಕ ಸ್ವಾತಂತ್ರ್ಯವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜಾತಿಗೊಬ್ಬ ಡಿಸಿಎಂ ವಿಚಾರವಾಗಿ ಯಾರು ಏನೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ ಅಂತಿಮವಾಗಿ ಈ ವಿಷಯದಲ್ಲಿ ನಿರ್ಧಾರ ಕೈಗೊಳುವುದು ಹೈಕಮಾಂಡ್ ಮಾತ್ರ ಎಂದರು.

ದೇವೇಗೌಡರು ಮೊದಲು ಜೆಡಿಎಸ್ ಉಳಿಸಿಕೊಳ್ಳಲಿ:

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಲಿದೆ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮೊದಲು ತಮ್ಮ ಜೆಡಿಎಸ್ ಪಕ್ಷವನ್ನು ಉಳಿಸಿಕೊಳ್ಳಲಿ. ಈ ಹಿಂದೆ ಯಾರು ಹೇಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿ ಆಗಿದ್ದರು ಎಂದು ಅವರು ನೋಡಲಿ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ರಾಮಭಕ್ತರು ಯಾರು?:

ರಾಮಮಂದಿರ ಉದ್ಘಾಟನೆ ನಡೆಯುತ್ತಿರುವ ಸಂದರ್ಭದಲ್ಲಿ ರಾಮ ಭಕ್ತರನ್ನು ರಾಜ್ಯ ಸರಕಾರ ಜೈಲಿಗೆ ಹಾಕುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 16 ಕೇಸು ಇರುವವರು, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು, ಜೂಜು ಆಡಿಸುವವರು, ಅಕ್ರಮ ಸಾರಾಯಿ ಮಾರಾಟ ಮಾಡುವವರು ರಾಮಭಕ್ತರಾ? ಎಂದು ಮರು ಪ್ರಶ್ನೆ ಹಾಕಿದರು.

ನಮ್ಮ ಜಿಲ್ಲೆಯಲ್ಲಿಯೇ ಹಲವಾರು ಕೇಸು ಹಾಕಿಸಿಕೊಂಡಿರುವವರು, ಅಪಘಾತವನ್ನು ಹಲ್ಲೆ ಯತ್ನ ಎಂದು ಬಿಂಬಿಸಿದವರು ರಾಮಭಕ್ತರೇ? ಈ ವಿಚಾರದಲ್ಲಿ ಆರ್.ಅಶೋಕ್ ನನ್ನ ರಾಜೀನಾಮೆ ಕೇಳಿದ್ದರು. ಈಗ ಅರೆಸ್ಟ್ ಮಾಡಿ ಎಂದು ಅಭಿಯಾನ ಮಾಡುತ್ತಿದ್ದಾರೆ. ಅಶೋಕಣ್ಣ ನೀವು ಯಾರ ಪರವಾಗಿ ಪ್ರತಿಭಟನೆ ಮಾಡುತ್ತಿದ್ದೀರಾ ? ಎಂದು ಯೋಚಿಸಿ ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.

ಕೇಸು ದಾಖಲಿಸಿದ್ದು ಅಣ್ಣಾಮಲೈ:

ಬಾಬಾಬುಡನ್‍ಗಿರಿ ವಿಚಾರದಲ್ಲಿ ಭಕ್ತರ ಮೇಲೆ ಕೇಸು ದಾಖಲಿಸಿದ್ದು ಈಗಿನ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ. ಬಹಳ ದಿನ ಬಾಕಿ ಇರುವ ವಾರಂಟ್ ಕೇಸ್ ಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಸೂಚಿಸಿದ್ದರಿಂದ ಸರಕಾರ ಕ್ರಮವಹಿಸುತ್ತಿದೆ. ಈ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಹಾಗೂ ಅಶೋಕ್ ಅವರೇಕೆ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಲಿಲ್ಲ ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News