ʼಹನಿಟ್ರ್ಯಾಪ್ʼ ಆರೋಪದ ಬಗ್ಗೆ ನ್ಯಾಯಾಂಗ ಅಥವಾ ಸಿಬಿಐ ತನಿಖೆಯಾಗಬೇಕು: ಸಿ.ಟಿ. ರವಿ

ಸಿ.ಟಿ. ರವಿ
ಚಿಕ್ಕಮಗಳೂರು: 48 ಶಾಸಕರ ʼಹನಿಟ್ರ್ಯಾಪ್ʼ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ, ಇದು ಸಣ್ಣ ವಿಚಾರ ಅಲ್ಲ, ಇದರ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಡ್ಜ್, ಶಾಸಕರು, ಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿಸಿ ಬ್ಲಾಕ್ ಮೇಲ್ ಮಾಡಿರುವ ಆರೋಪ ಇದೆ. ಶತ್ರುಗಳನ್ನು ಮಣಿಸಲು ರಾಜ ಮಹಾರಾಜರು ಇದನ್ನು ಬಳಸಿಕೊಳ್ಳುತ್ತಿದ್ದರು. ಶತ್ರುದೇಶಗಳು ಬೇಹುಗಾರಿಕೆಗೆ ಸುಂದರ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದರು. ಋಷಿ ಮುನಿಗಳ ತಪಸ್ಸು ಭಂಗ ಮಾಡೋದಕ್ಕೆ ದೇವ ಕನ್ಯೆಯರನ್ನು ಬಳಸಿಕೊಂಡಿದ್ದು, ಪುರಾಣಗಳಲ್ಲಿವೆ ಎಂದರು.
ಹಿರಿಯ ಸಚಿವ, ಮತ್ತೊಬ್ಬ ಹಿರಿಯ ಸಚಿವನ ರಾಜಕೀಯ ಜೀವನ ಮುಗಿಸೋದಕ್ಕೆ ಈ ರೀತಿ ಮಾಡಿದ್ದಾರೆಂದು ಆರೋಪಿಸಲಾಗಿದೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಯಾರೂ ದೂರು ನೀಡಿಲ್ಲವಾದರೂ ಈ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲಿ ಆರೋಪ ಮಾಡುವುದು ಸಾಮಾನ್ಯ ವಿಚಾರವಲ್ಲ, ಆ ಆರೋಪನ್ನೇ ದೂರೆಂದು ಪರಿಗಣಿಸಿ ನ್ಯಾಯಾಂಗ ಅಥವಾ ಸಿಬಿಐ ತನಿಖೆಗೆ ಆಗ್ರಹಿಸಿದ್ದೇನೆ. ನಮ್ಮ ಹೋರಾಟ ಹತ್ತಿಕ್ಕಲು 18 ಜನ ಶಾಸಕರನ್ನು ಅಮಾನತು ಮಾಡಿದ್ದಾರೆ. ವಿಧಾನಸಭೆ ಅಧ್ಯಕ್ಷರು ತಮ್ಮ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದರು.