ಸೋನಿಯಾ, ರಾಹುಲ್ ವಿರುದ್ಧ ಈಡಿ ಚಾರ್ಜ್‌ಶೀಟ್‌ | ಪ್ರಧಾನಿ ಮೋದಿಯ ಸೇಡಿನ ರಾಜಕಾರಣದ ಮುಂದುವರಿದ ಭಾಗ : ಸಿದ್ದರಾಮಯ್ಯ

Update: 2025-04-16 12:07 IST
Photo of  Siddaramaiah

 ಮುಖ್ಯಮಂತ್ರಿ ಸಿದ್ದರಾಮಯ್ಯ

  • whatsapp icon

ಬೆಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಕೇಂದ್ರ ಸರಕಾರದ ಪಾಲಿಗೆ ಸಿಂಹಸ್ವಪ್ನರಾಗಿರುವ ರಾಹುಲ್ ಗಾಂಧಿಯವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ (ಈಡಿ) ಕ್ರಮ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸೇಡಿನ ರಾಜಕಾರಣದ ಮುಂದುವರಿದ ಭಾಗ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, ಇದು ಕೇವಲ ನಮ್ಮ ಪಕ್ಷದ ಇಬ್ಬರು ನಾಯಕರ ಇಲ್ಲವೇ ಕಾಂಗ್ರೆಸ್ ಪಕ್ಷದ ವಿರುದ್ಧದ ಸೇಡಿನ ಕ್ರಮ ಅಲ್ಲ, ಇದು ವಿರೋಧದ ದನಿಯನ್ನು ಸಹಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ದೇಶದ ವಿರೋಧ ಪಕ್ಷಗಳು ಮತ್ತು ಪ್ರಜಾಪ್ರಭುತ್ವಪ್ರೇಮಿ ನಾಗರಿಕರಿಗೆ ನರೇಂದ್ರ ಮೋದಿ ಸರಕಾರ ನೀಡಿರುವ ಎಚ್ಚರಿಕೆಯಾಗಿದೆ. ದ್ವೇಷದ ರಾಜಕಾರಣವನ್ನು ಎದುರಿಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ ಇದನ್ನು ಕೂಡಾ ಸತ್ಯ ಮತ್ತು ನ್ಯಾಯದ ಬಲದಿಂದ ಎದುರಿಸಲಿದೆ ಎಂದು ಹೇಳಿದ್ದಾರೆ.

ಸ್ವಾಯತ್ತ ತನಿಖಾ ಸಂಸ್ಥೆಯಾದ ಈಡಿಯನ್ನು ವಿರೋಧ ಪಕ್ಷದ ನಾಯಕರ ವಿರುದ್ಧ ದ್ವೇಷ ಸಾಧಿಸಲು ಆಯುಧವನ್ನಾಗಿ ಬಳಸುತ್ತಾ ಬಂದಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಈಗ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಯಾಗಿರುವ ಸುಳ್ಳು ಆರೋಪವನ್ನು ಬಳಸಿಕೊಂಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆದೇಶದಂತೆಯೇ ಈ ದ್ವೇಷದ ರಾಜಕಾರಣ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದಿದ್ದಾರೆ.

ವಿಚಾರಣೆಯ ನೆಪದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಸೇರಿದಂತೆ ನಮ್ಮ ಪಕ್ಷದ ಪ್ರಮುಖ ನಾಯಕರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿ ಪೀಡಿಸಿದ ಈ.ಡಿ ಯು ಅದರಿಂದ ಯಾವುದೇ ಫಲ ಸಿಗದೆ ಇದ್ದಾಗ ಕಲ್ಪಿತ ಕತೆಗಳನ್ನು ಕಟ್ಟಿ ಆರೋಪ ಪಟ್ಟಿ ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ದ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಬೀದಿಗೆ ಇಳಿದು ಇದನ್ನು ಪ್ರತಿಭಟಿಸಲಿದ್ದಾರೆ. ಈ ಪ್ರತಿರೋಧಕ್ಕೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News