ಮೈಸೂರಿನಲ್ಲಿ ಟಿಪ್ಪು ಸುಲ್ತಾನ್‍ರ ಅಪರೂಪದ ಖಡ್ಗ ಪತ್ತೆ!

Update: 2025-03-11 22:32 IST
ಮೈಸೂರಿನಲ್ಲಿ ಟಿಪ್ಪು ಸುಲ್ತಾನ್‍ರ ಅಪರೂಪದ ಖಡ್ಗ ಪತ್ತೆ!
  • whatsapp icon

ಬೆಂಗಳೂರು: ಮೈಸೂರು ಹುಲಿ ಟಿಪ್ಪು ಸುಲ್ತಾನ್ ತನ್ನ ಆತ್ಮರಕ್ಷಣೆಗಾಗಿ ಬಳಸುತ್ತಿದ್ದ ಅತಿ ಅಪರೂಪದ ಖಡ್ಗ ಮೈಸೂರಿನಲ್ಲಿ ಪತ್ತೆಯಾಗಿದ್ದು, ಟಿಪ್ಪು ಸುಲ್ತಾನ್ ಅವರ ವೈಯಕ್ತಿಕ ಶಸ್ತ್ರಗಾರದ ಭಾಗವಾಗಿದ್ದ ಕೆಲ ಖಡ್ಗಗಳ ಪೈಕಿ ಈ ಖಡ್ಗ ಬಹಳ ವಿಶೇಷತೆ ಹೊಂದಿದೆ.

ಖಡ್ಗದ ಮೇಲೆ ಪಾರ್ಸಿ ಭಾಷೆಯಲ್ಲಿ ಚಿನ್ನದ ಬಣ್ಣ ಇರುವ ಟಿಪ್ಪು ಸುಲ್ತಾನ್ ಹೆಸರು ಇದೆ. ಚಂದ್ರದ ಚಿಹ್ನೆಗಳಿವೆ. ತಾಮ್ರದ ಹಿಡಿಯ ಮೇಲೆ ಚಿನ್ನದ ಲೇಪನ ಇದೆ. ಖಡ್ಗವು 10.16*91.44 ಸೆ.ಮೀ. ಎತ್ತರ ಮತ್ತು ಅಗಲ ಇದೆ. ಹಿಂದಿನ ಕಾಲದಲ್ಲಿ ಸ್ಥಳಿಯ ತಂತ್ರಜ್ಞಾನದೊಂದಿಗೆ ವಿಶೇಷ ಸ್ಟೀಲ್‍ನಿಂದ ತಯಾರಿಸಲಾಗಿದೆ. ತನ್ನ ಆತ್ಮರಕ್ಷಣೆಗಾಗಿ ಮಾತ್ರ ಈ ಖಡ್ಗವನ್ನು ಟಿಪ್ಪು ಸುಲ್ತಾನ್ ಬಳಸುತ್ತಿದ್ದರು. ಇದು ಚಾರಿತ್ರಿಕ ಹಿನ್ನೆಲೆ ಹೊಂದಿದೆ.

ಪುರತತ್ವಶಾಸ್ತ್ರದ ಇಲಾಖೆಯಿಂದ ಪುರಾತನ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪರವಾನಗಿ ಹೊಂದಿರುವ ಖಾಸಗಿ ಸಂಸ್ಥೆಯೊಂದು, ರಾಜವಂಶಸ್ಥರಿಂದ ಖಡ್ಗವನ್ನು ಖರೀದಿಸಿ ಸಂರಕ್ಷಿಸಿ ಇಟ್ಟುಕೊಂಡಿದೆ. ರಾಜ್ಯ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆ, ಇದನ್ನು ಪರಿಶೀಲಿಸಿ ಅಪರೂಪವಾದ ಖಡ್ಗವೆಂದು ತಿಳಿಸಿ ನೋಂದಾಯಿಸಿ ಪ್ರಮಾಣ ಪತ್ರ ನೀಡಿದೆ.

ಬ್ರಿಟಿಷ್ ಸಂಗ್ರಹಾಲಯ ಸೇರಿ ಇತರೆ ಕಡೆ ದೊರೆತಿರುವ ಟಿಪ್ಪುವಿನ ಖಡ್ಗದ ಮೇಲೆ ಕು‌ರ್‌ ಆನ್ ವಾಕ್ಯಗಳು ಮಾತ್ರ ಇದೆ. ಆದರೆ, ಟಿಪ್ಪುವಿನ ಹೆಸರು ಇರುವುದಿಲ್ಲ. ಆದರೆ, ಈ ಖಡ್ಗದ ಮೇಲೆ ಟಿಪ್ಪು ಸುಲ್ತಾನ್ ಹೆಸರು ಇದೆ. ಕೆಲ ಸಂದರ್ಭಗಳಲ್ಲಿ ಆತ್ಮ ರಕ್ಷಣೆಗಾಗಿ ತನ್ನ ಜೊತೆಯಲ್ಲಿ ಟಿಪ್ಪು ಇಟ್ಟುಕೊಳ್ಳುತ್ತಿದ್ದರು. ಐತಿಹಾಸಿಕ ಖಡ್ಗವನ್ನು ರಾಜ್ಯ ಸರ್ಕಾರ ಖರೀದಿಸಿ ವಸ್ತು ಸಂಗ್ರಹಾಲಯದಲ್ಲಿ ಇಡಬೇಕು ಎಂಬುದು ಇತಿಹಾಸ ತಜ್ಞರ ಸಲಹೆಯಾಗಿದೆ.

1799ರಲ್ಲಿ 4ನೆ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದಾಗ ಖಡ್ಗವು ದಿವಾನ್ ಪೂರ್ಣಯ್ಯ ಅವರಿಗೆ ಸಿಕ್ಕಿತ್ತು. ನಂತರ, ದಿವಾನ್ ಪೂರ್ಣಯ್ಯನಿಂದ ರಾಜವಂಶಸ್ಥರ ಬಳಿ ಬಂದಿರಬಹುದು ಎನ್ನಲಾಗಿದೆ.

ಈ ಕುರಿತು ಇತಿಹಾಸ ಸಂಶೋಧಕ ಡಾ.ಬಿ.ರಾಮಾಚಾರಿ ಪ್ರತಿಕ್ರಿಯಿಸಿ, ಪುರಾತನ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟದ ಪರವಾನಗಿ ಹೊಂದಿರುವ ಖಾಸಗಿ ಸಂಸ್ಥೆಯೊಂದು 12 ವರ್ಷದ ಹಿಂದೆ ರಾಜವಂಶ್ಥರೊಬ್ಬರಿಂದ ಕಾನೂನಾತ್ಮಕವಾಗಿ ಖಡ್ಗವನ್ನು ಖರೀದಿಸಿದೆ. ಇತಿಹಾಸ ತಜ್ಞರು, ಮುಸ್ಲಿಮ್ ಪಂಡಿತರು, ಪುರಾತತ್ವ ಇಲಾಖೆ ಅಧಿಕಾರಿಗಳು ಇದನ್ನು ಪರಿಶೀಲಿಸಿ ಅಪರೂಪದ ಖಡ್ಗವಾಗಿದ್ದು, ಸರಕಾರಕ್ಕೆ ನೀಡಬೇಕೆಂದು ಎನ್ನುತ್ತಿದ್ದಾರೆ. ಹಾಗಾಗಿ, ವಸ್ತು ಸಂಗ್ರಹಾಲಯದಲ್ಲಿ ಖಡ್ಗವನ್ನು ಇಡಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News