ನಾಳೆ (ಸೆ. 29) ʼಕರ್ನಾಟಕ ಬಂದ್ʼ: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ

Update: 2023-09-28 18:04 GMT

ಬೆಂಗಳೂರು, ಸೆ. 28: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಒಕ್ಕೂಟವೂ ನಾಳೆ (ಶುಕ್ರವಾರ) ಅಖಂಡ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಈ ಹೋರಾಟಕ್ಕೆ ಸಾವಿರಾರು ಸಂಘಟನೆಗಳು ಬೆಂಬಲ ಘೋಷಿಸಿರುವ ಹಿನ್ನೆಲೆ ತುರ್ತು ಸೇವೆಗಳು ಹೊರತುಪಡಿಸಿ ಕರ್ನಾಟಕ ಸಂಪೂರ್ಣ ಸ್ತಬ್ಧವಾಗುವ ಸಾಧ್ಯತೆ ದಟ್ಟವಾಗಿದೆ.

ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಬಂದ್ ನಡೆಯಲಿದೆ. ತುರ್ತು ಸೇವೆಗಳು ಹೊರತುಪಡಿಸಿ, ಇನ್ನಿತರೆ ಸೇವೆಗಳು ಸ್ಥಗಿತವಾಗಲಿದೆ. ಜತೆಗೆ, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಅಧಿಕೃತವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ, ಕೆಲವಡೆ ಪರಿಸ್ಥಿತಿಯ ಅನುಗುಣವಾಗಿ ರಜೆ ಘೋಷಣೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿ, ಕೆಎಸ್ಸಾರ್ಟಿಸಿ ಸಿಬ್ಬಂದಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದ್ದು, ಸರಕಾರಿ ಬಸ್‍ಗಳ ಓಡಾಟ ಅಲ್ಲಲ್ಲಿ ಕಾಣಬಹುದಾಗಿದೆ. ಆದರೆ, ಖಾಸಗಿ ವಾಹನಗಳ ಸಂಘ-ಸಂಸ್ಥೆಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, ಆಟೊರಿಕ್ಷಾ, ಟ್ಯಾಕ್ಸಿ ರಸ್ತೆಗಿಳಿಯುವುದು ವಿರಳವಾಗಿರಲಿವೆ. ಮತ್ತೊಂದೆಡೆ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ತಡೆದು ಚಳವಳಿ ನಡೆಸಲು ಹೋರಾಟಗಾರರು ಮುಂದಾಗಿದ್ದಾರೆ.

ಸರಕಾರಿ ಹಾಗೂ ಬಿಬಿಎಂಪಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬಂದ್ ವೇಳೆ ಅಹಿತಕರ ಘಟನೆಗಳು ನಡೆದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ 80 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಹೋರಾಟದ ಭಾಗವಾಗಿ ಬೆಂಗಳೂರಿನಲ್ಲಿ ಹೆಚ್ಚು ಪರಿಣಾಮ ಬೀರುವ ಹಿನ್ನೆಲೆ ಬೆಂಗಳೂರು ನಗರ ಪೆÇಲೀಸ್ ಆಯುಕ್ತ ದಯಾನಂದ ಅವರು ಇಂದು ಮಧ್ಯರಾತ್ರಿ 12ರಿಂದ ನಾಳೆ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ವಿಧಿಸಿದ್ದಾರೆ.

ಜೊತೆಗೆ ಕಮಿಷನರೇಟ್ ಹಾಗೂ ಜಿಲ್ಲಾ ಮಟ್ಟದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೆÇಲೀಸ್ ಪಡೆಗಳನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿದೆ.

ಕಾವೇರಿ ವಿಚಾರವಾಗಿ ರೈತಪರ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್ ಯಶಸ್ವಿಯಾಗಿತ್ತು. ಇದಕ್ಕೂ ಮುನ್ನ ಮಂಡ್ಯ ಬಂದ್ ಸಹ ಯಶಸ್ವಿಯಾಗಿತ್ತು. ಈಗ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಅದರಲ್ಲೂ ಕರ್ನಾಟಕ ಬಂದ್ ಸಂಬಂಧ ಕಾವೇರಿ ಕಣಿವೆಯಲ್ಲಿರುವ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚು ಬಂದ್ ಬಿಸಿ ತಟ್ಟುವ ಸಾಧ್ಯತೆಯಿದೆ.

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ತಡೆ: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು ಸಂಘಟನೆಯು ಶುಕ್ರವಾರ ಬೆಳಗ್ಗೆ 11ರಿಂದ 1ಗಂಟೆವರೆಗೂ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಬಂದ್ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಈ ವೇಳೆ ಸುಗಮ ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಚಳವಳಿಯಲ್ಲಿ ಸಂಘಟನೆ ಸಂಚಾಲಕರಾದ ಕುರುಬೂರು ಶಾಂತಕುಮಾರ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ಸಂಘಟನೆಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಏನೇನಿರುತ್ತೆ..?

* ಆಸ್ಪತ್ರೆ

* ಮೆಡಿಕಲ್ ಸ್ಟೋರ್

* ಹಾಲಿನ ಬೂತ್

* ಅಗತ್ಯ ವಸ್ತುಗಳು

* ಮೆಟ್ರೋ

* ಆಂಬ್ಯುಲೆನ್ಸ್

ಏನಿರಲ್ಲ..?

* ಆಟೋ, ಕ್ಯಾಬ್

* ಗೂಡ್ಸ್ ವಾಹನಗಳು

* ಖಾಸಗಿ ಬಸ್‍ಗಳು

* ಥಿಯೇಟರ್

* ಸೂಪರ್ ಮಾರ್ಕೆಟ್

* ಪೆಟ್ರೋಲ್ ಬಂಕ್

* ಶಾಲಾ -ಕಾಲೇಜ್

* ಅಂಗಡಿಗಳು

* ಬೀದಿ ಬದಿ ಅಂಗಡಿಗಳು

* ಜ್ಯುವೆಲ್ಲರಿ ಶಾಪ್‍ಗಳು

* ಕೈಗಾರಿಕೆಗಳು

* ಹೋಟೆಲ್‍ಗಳು

* ಮಾಲ್‍ಗಳು

* ಬಿಎಂಟಿಸಿ ಬಸ್

ನಿಷೇಧಾಜ್ಞೆ ಜಾರಿ ಬೇಕಾಗಿರಲಿಲ್ಲ: ಇದರ ಅವಶ್ಯಕತೆ ಇರಲಿಲ್ಲ, ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್ ವರೆಗೆ ಶಾಂತಿಯುತವಾಗಿ ರ್ಯಾಲಿ ನಡೆಸಲಿದ್ದೇವೆ, ಯಾರಿಗೂ ತೊಂದರೆ ಕೊಡೋದಿಲ್ಲ, ಆದರೆ, ಪೆÇಲೀಸರು ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದು ಸರಿಯಲ್ಲ’ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ರೈಲು ಪ್ರಯಾಣ ವ್ಯತ್ಯಯ?: ಮೈಸೂರಿನಿಂದ ತೆರಳುವ ರೈಲು ತಡೆಯಲು ರೈತರು ತಡೆವೊಡ್ಡುವ ಕಾರಣದಿಂದ ರೈಲು ಮಾರ್ಗದಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ರೈಲುಗಳ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಂದ್‍ಗೆ ಅನುಮತಿ ಇಲ್ಲ: ನಾಡಿನ ಹಿತಾಸಕ್ತಿ ವಿಷಯವಾಗಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅಧಿಕಾರ ಇದೆ. ಈ ಹಿನ್ನೆಲೆಯಲ್ಲಿ ನಾಳೆ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ಬಂದ್‍ಗೆ ಅನುಮತಿ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳದಿದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News