ಮೈಕ್ರೋ ಫೈನಾನ್ಸ್‌ಗಳಿಂದ ತೊಂದರೆ | ಮಸೂದೆ ಕುರಿತು ಅಧಿಕಾರಿಗಳೊಂದಿಗೆ ಎಚ್.ಕೆ.ಪಾಟೀಲ್, ಪರಮೇಶ್ವರ್‌ ಸಭೆ

Update: 2025-01-29 17:13 IST
ಮೈಕ್ರೋ ಫೈನಾನ್ಸ್‌ಗಳಿಂದ ತೊಂದರೆ | ಮಸೂದೆ ಕುರಿತು ಅಧಿಕಾರಿಗಳೊಂದಿಗೆ ಎಚ್.ಕೆ.ಪಾಟೀಲ್,  ಪರಮೇಶ್ವರ್‌ ಸಭೆ
  • whatsapp icon

ಬೆಂಗಳೂರು : ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುವುದು, ಕಿರುಕುಳ ನೀಡುವುದನ್ನು ನಿಷೇಧಿಸುವ "ಕರ್ನಾಟಕ ಮೈಕ್ರೋಫೈನಾನ್ಸ್ ಪ್ರಿವೆನ್ಷನ್ ಆಫ್ ಕೋಯೆರ್ಸಿವ್ ಆ್ಯಂಡ್ ಇನ್‌ಹ್ಯೂಮನ್ ಆ್ಯಕ್ಷನ್ 2025" ಮಸೂದೆ ಕುರಿತು ಕಾನೂನು ಸಚಿವರಾದ ಎಚ್.ಕೆ.ಪಾಟೀಲ್ ಹಾಗೂ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಕಂದಾಯ ಮತ್ತು ಆರ್ಥಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇದನ್ನು ತಡೆಗಟ್ಟಲು ತ್ವರಿತವಾಗಿ ಕಾನೂನು ತರಬೇಕು ಎಂದು ಮುಖ್ಯಂಮತ್ರಿಯವರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಸುದೀರ್ಘವಾಗಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು‌.

ಸಮಾಜದಲ್ಲಿ ಕೆಳಸ್ತರದ ಜನರು ಕಿರುಸಾಲ ತೆಗೆದುಕೊಳ್ಳುತ್ತಾರೆ. ಸಾಲ ವಸೂಲಿ ಮಾಡಲು ಅಮಾನವೀಯವಾಗಿ ವರ್ತಿಸಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆಗಳನ್ನು ನಿಲ್ಲಿಸಬೇಕಿದೆ. ಜನ ಊರು ಬಿಡುತ್ತಿರುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಹೀಗಾಗಿ ಮಸೂದೆ ತರಲು ಬಜೆಟ್ ಅಧಿವೇಶನದವರೆಗೂ ಕಾಯಲು ಆಗುವುದಿಲ್ಲ. ಸಭೆಯ ಪ್ರಮುಖ ಅಂಶಗಳನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಕ್ಯಾಬಿನೆಟ್ ಮುಂದೆ ತರಲಾಗುವುದು ಎಂದು ಅವರು ತಿಳಿಸಿದರು‌.

ಮೈಕ್ರೋ ಫೈನಾನ್ಸ್‌ಗಳ‌ ಅಮಾನುಷ ವರ್ತನೆಯ ಘಟನೆಗಳು ಗಮನಕ್ಕೆ ಬಂದ ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಜನರೊಂದಿಗೆ ಒತ್ತಾಯ ಪೂರ್ವಕವಾಗಿ ನಡೆದುಕೊಳ್ಳುವುದು ಸಮಾಜಕ್ಕೆ ಒಳ್ಳೆಯದಲ್ಲ ಎಂದರು.

ಸಾಲ ವಸೂಲಾತಿ ಪ್ರಮಾಣ ಕಡಿಮೆ ಇರಬಹುದು. ಮೈಕ್ರೋಫೈನಾನ್ಸ್ ಸಂಸ್ಥೆಗಳ ಮೇಲಾಧಿಕಾರಿಗಳ ಒತ್ತಡವಿರಬಹುದು. ಆದರೂ ಈ ರೀತಿಯಾಗಿ ನಡೆದುಕೊಳ್ಳುವುದು ಸರಿಯಾದ ಕ್ರಮವಲ್ಲ. ಸಾಲ‌ ಪಡೆಯುವುದು ಮತ್ತು ನೀಡುವುದರ ಕುರಿತು ಜನರಿಗೆ ಜಾಗೃತಿ‌ ಮೂಡಿಸಲಾಗುವುದು ಎಂದು ಹೇಳಿದರು.

ಮೈಕ್ರೋಫೈನಾನ್ಸ್ ಸಂಸ್ಥೆಗಳ ಆರ್ಥಿಕ ವ್ಯವಹಾರಗಳಿಗೆ ಕಡಿವಾಣ ಹಾಕುತ್ತಿಲ್ಲ. ಸಾಲ ಇಷ್ಟೇ ಕೊಡಬೇಕು ಎಂಬುದನ್ನು ಹೇಳುತ್ತಿಲ್ಲ. ಆದರೆ, ಜನರಿಂದ ಸಾಲ ವಸೂಲಿ ಮಾಡುವ ಕ್ರಮ ಸರಿಯಾಗಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News