ಹಲವರ ಖಾತೆಗೆ ಜಮೆ ಆಗದ 'ಗೃಹಲಕ್ಷ್ಮಿ' ಹಣ; ಕಾರಣ ತಿಳಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2023-11-07 12:56 GMT

ಬೆಂಗಳೂರು: ರಾಜ್ಯ ಸರಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಎರಡನೇ ಕಂತು ವಿಳಂಬವಾಗುತ್ತಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

''ಈ ತಿಂಗಳದ್ದು ಸುಮಾರು ಒಂದು ಕೋಟಿ ಹತ್ತು ಲಕ್ಷ ಜನರಿಗೆ ಸರಕಾರದಿಂದ ಹಣ ಬಿಡುಗಡೆ ಆಗಿದೆ. ಕೆವೈಸಿ ತೊಂದರೆ, ತಾಂತ್ರಿಕ ತೊಂದರೆ ಆಗಿದ್ದರಿಂದ ಹಣ ವರ್ಗಾವಣೆಗೆ ತೊಂದರೆ ಆಗಿದೆ. ಆದರೆ ಎಲ್ಲರಿಗೂ ಹಣ ಸಿಗಲಿದೆ, ಯಾರೂ ತಲೆ ಕೆಡಸಿಕೊಳ್ಳಬೇಡಿ'' ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. 

''ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಇಲಾಖೆಯಿಂದ ಆಗುತ್ತಿದೆ. ಬೆಂಗಳೂರಿನ ಬಾಲ ಭವನದಲ್ಲಿ ಪ್ರತಿಯೊಂದು ಜಿಲ್ಲೆಯ ಸಿಡಿಪಿಒ ಮತ್ತು ಎಲ್ಲ ಬ್ಯಾಂಕ್ ಗಳ ಸಂಬಂಧಪಟ್ಟವರನ್ನು ಕರೆದು ಸಭೆ ನಡೆಸುತ್ತಿದ್ದೇವೆ'' ಎಂದು ಹೇಳಿದ್ದಾರೆ. 

''ಸರಕಾರದಿಂದ ಖಾತೆಗೆ ಹಣ ಬರಲು ಈ ಹಿಂದೆ 25ದಿನ ಬೇಕಾಗುತ್ತಿತ್ತು. ಈಗ ಅದನ್ನ ಬಹಳ ಸರಳೀಕರಣ ಮಾಡಿದ್ದೇವೆ. ಸರಕಾರ ಟ್ರೆಶರಿಗೆ ಕಳುಹಿಸಿ ಅಲ್ಲಿಂದ ನಮ್ಮ ಇಲಾಖೆಯ ಪ್ರಧಾನ ಕಚೇರಿಯಿಂದ ಎಲ್ಲರಿಗೂ ಹಣ ಹೋಗುವಂತೆ ಮಾಡಿದ್ದೇವೆ'' ಎಂದು ಮಾಹಿತಿ ನೀಡಿದ್ದಾರೆ. 

''ತಡವಾದರೂ ಒಮ್ಮೆಯೇ ಹಣ ಜಮಾ ಆಗುತ್ತದೆ''

''ತಡವಾದರೂ ಒಮ್ಮೆಯೇ ಎರಡು ಕಂತಿನ ನಾಲ್ಕು ಸಾವಿರ ಹಣ ಜಮಾ ಆಗುತ್ತದೆ. ಅಗಸ್ಟ್ 30ರ‌ ನಂತರ ನೋಂದಣಿ ಮಾಡಿಸಿದವರಿಗೆ ಒಂದು ಕಂತಿನ ಹಣ ಬಂದಿದೆ'' ಎಂದು ಸಚಿವರು ಮಾಹಿತಿ ನೀಡಿದ್ದಾರೆ.  

''ಆಗಸ್ಟ್ ತಿಂಗಳಿನಲ್ಲಿ ಶೇ.88ರಷ್ಟು ಮಂದಿಗೆ ಹಣ ಸಂದಾಯವಾಗಿದ್ದು, ಸೆಪ್ಟೆಂಬರ್ ತಿಂಗಳ ಹಣ ಹಂತ ಹಂತವಾಗಿ ಸಂದಾಯವಾಗುತ್ತಿದೆ. ಅಕ್ಟೋಬರ್ ತಿಂಗಳ ಹಣ ಶೇ.100ರಷ್ಟು ಫಲಾನುಭವಿಗಳಿಗೆ ಸಂದಾಯವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ'' ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News