ಅರ್ಚಕ, ಪೌರ ಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಿ: ದಸಂಸ ಒತ್ತಾಯ

Update: 2023-07-04 16:39 GMT

ಬೆಂಗಳೂರು, ಜು. 4: ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ‘ದಸಂಸ’ ಸಮಾನ ಮನಸ್ಕ ಸಂಘಟನೆಗಳು ತೀರ್ಮಾನಿಸಿದ್ದು, ಸೆಪ್ಟೆಂಬರ್‍ನಲ್ಲಿ ದಕ್ಷಿಣ ಭಾರತ ಸಮಾವೇಶ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಜೀವನಹಳ್ಳಿ ವೆಂಕಟೇಶ್ ತಿಳಿಸಿದ್ದಾರೆ.

ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸಂವಿಧಾನ ಬದಲಾವಣೆ ಮಾಡುವ ಉಮೇದಿನಲ್ಲಿದ್ದ ಬಿಜೆಪಿ ನೇತೃತ್ವದ ಸರಕಾರವನ್ನೇ ಬದಲಾವಣೆ ಮಾಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಇದೇ ರೀತಿಯ ಫಲಿತಾಂಶ ಬರಲಿದ್ದು, ಕೋಮುವಾದಿ ಬಿಜೆಪಿ ಸರಕಾರ ನೆಲಕಚ್ಚಲಿದೆ’ ಎಂದು ನುಡಿದರು.

ಪರಿಶಿಷ್ಟರಿಗೆ ಆಯವ್ಯಯದಲ್ಲಿ ಶೇ.24ರಷ್ಟು ಅನುದಾನ ಮೀಸಲಿಡುವ ಸಂಬಂಧ ಎಸ್ಸಿಪಿ-ಟಿಎಸ್ಪಿ ಕಾಯ್ದೆ ಜಾರಿಗೆ ಬಂದಿದ್ದು, ಎಸ್ಸಿ-ಎಸ್ಟಿ ವರ್ಗಕ್ಕೆ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ತಡೆಗಟ್ಟಲು ಸೆಕ್ಷನ್ 7ಡಿ ಕೂಡಲೇ ತೆಗೆದು ಹಾಕಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕು. ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಪಿಟಿಸಿಎಲ್ ಕಾಯ್ದೆಯನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದರು.

‘ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿದ್ದ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಇನ್ನಿತರ ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಅರ್ಚಕ ಮತ್ತು ಪೌರ ಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಿ ಈ ಎರಡೂ ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಜಾರಿಗೆ ತರಬೇಕು’ ಎಂದು ವೆಂಕಟೇಶ್ ಆಗ್ರಹಿಸಿದರು. ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಕೆಂಪಣ್ಣ ಸಾಗ್ಯ, ಶಿವಜ್ಞಾನಿ ಕಪ್ಪಗಲ್, ರಾಜಶೇಖರ್ ಕೋಟಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News