ಅಧಿಕಾರಿಗಳ ನಕಲಿ ಸಹಿಯೊಂದಿಗೆ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ

Update: 2023-08-08 10:16 GMT

ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಸರಕಾರದ ತೇಜೋವಧೆಯಾಗುವಂತೆ ಸುಳ್ಳು ಆರೋಪ ಮಾಡಿ ನಕಲಿ ಸಹಿಯೊಂದಿಗೆ ರಾಜ್ಯಪಾಲರಿಗೆ ದೂರು ನೀಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯ‌ ಮಾಡಿದೆ. 

ಮಂಗಳವಾರ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್‌‌ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಅವರ ನೃತೃತ್ವದ ಕಾಂಗ್ರೆಸ್ ನಿಯೋಗ ಸಚಿವರಿಗೆ ಮನವಿ ಪತ್ರ ಸಲ್ಲಿಕೆ ಮಾಡಿದೆ. 

ʼʼಕೃಷಿ ಇಲಾಖೆ ಸಚಿವ ಸ್ಥಾನ ಅಂದರೆ ಅತ್ಯಂತ ಮಹತ್ವದ ಜವಾಬ್ದಾರಿಯಾಗಿದೆ. ಈ ಇಲಾಖೆಯ ಜವಾಬ್ದಾರಿಯನ್ನು ಮಾನ್ಯ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಅತ್ಯಂತ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಯವರಾದ ಅವರು ರೈತಪರವಾಗಿ ಅವಿರತವಾಗಿ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತದೆ, ಅಲ್ಲದೆ ಯಾವುದೇ ರಾಗ ದ್ವೇಷ ಇಲ್ಲದ ಪ್ರಾಮಾಣಿಕವಾಗಿ ಅವರು ಇಲಾಖೆಯ ಹೊಣೆಯನ್ನು ಬಹಳ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಇದು ರೈತರಿಗೆ ನೇರವಾಗಿ ಸಂಬಂಧಪಟ್ಟ ಇಲಾಖೆಯಾಗಿದೆ. ರೈತರೆಂದರೆ ನನ್ನ ಕುಟುಂಬ ಎಂದು ಅವರು ಆಗಾಗ ಹೇಳಿಕೊಳ್ಳುತ್ತಾ ಬಂದಿದ್ದಾರೆ. ಅಲ್ಲದೆ ನಮ್ಮ ಕಾಂಗ್ರೆಸ್ ಸರ್ಕಾರ ಸಹ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದೆಯೂ ಸಹ ಇಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡುವ ಕನಸನ್ನು ಮಾನ್ಯ ಸಚಿವರು ಹೊಂದಿದ್ದಾರೆ, ಆದರೆ ಅವರ ಜನಪ್ರಿಯತೆ, ಏಳಿಗೆಯನ್ನು ಸಹಿಸದ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಅವರ ವಿರುದ್ಧ ಪಿತೂರಿ ಕೆಲಸವನ್ನು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಸೃಷ್ಟಿಸಿ ರಾಜ್ಯಪಾಲರಿಗೆ ದೂರು ನೀಡಲಾಗಿದೆ, ಇದನ್ನು ಉದ್ದೇಶಪೂರ್ವಕವಾಗಿ ಮಾನಹಾನಿ ಮಾಡಲೆಂದ ಮಾಡಿರುವುದಾಗಿ ಗೊತ್ತಾಗಿದೆʼʼ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ʼʼಅಲ್ಲದೆ ಯಾವೊಬ್ಬ ಕೃಷಿ ಅಧಿಕಾರಿಯು ಸಹ ಅವರ ವಿರುದ್ಧ ಈ ರೀತಿಯ ಪತ್ರ ಬರೆದಿಲ್ಲವೆಂದು ಸ್ಪಷ್ಟಪಡಿಸಿರುತ್ತಾರೆ. ಸಹಿ ಸಹ ತಾವು ಮಾಡಿದ್ದಲ್ಲ ಎಂಬುದನ್ನು ಸ್ಪಷ್ಟಪಡಿಸಿರುತ್ತಾರೆ. ಇಲ್ಲಿ ಸಚಿವರ ಮೇಲೆ ವೃಥಾ ಲಂಚದ ಆರೋಪ ಮಾಡಿ ಆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರವನ್ನು ಸೃಷ್ಟಿಸಿ ಅವರ ನಕಲಿ ಸಹಿಯನ್ನು ಮಾಡಿ ರಾಜ್ಯಪಾಲರಿಗೆ ದೂರು ಕೊಟ್ಟಿರುತ್ತಾರೆ. ಇದು ಅಕ್ಷಮ್ಯ ಅಪರಾಧವಾಗಿದೆ, ಅಲ್ಲವೇ ಇವರ ವಿರುದ್ಧ ಇಂತಹ ಹತ್ತಾರು ಷಡ್ಯಂತ್ರಗಳು ನಡೆಯುತ್ತಿರುವುದು ಸಹ ನಮ್ಮ ಗಮನಕ್ಕೆ ಬಂದಿದೆʼʼ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಸಂದರ್ಭದಲ್ಲಿ ಶಾಸಕ ಪಿ.ನರೇಂದ್ರ ಸ್ವಾಮಿ, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಇತರರು ಉಪಸ್ಥಿತರಿದ್ದರು. 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News