ಸರಕಾರಗಳ ಭರವಸೆ ಈಡೇರಿಸುವ ವಿಚಾರಕ್ಕೆ ಗದ್ದಲ; ಅಶ್ವತ್ಥನಾರಾಯಣರತ್ತ ನೋಡಿ ಉರಿಗೌಡ ಎಂದ ಕಾಂಗ್ರೆಸ್ ಶಾಸಕ..!
ಬೆಂಗಳೂರು, ಜು.13: ಆಡಳಿತ ನಡೆಸುವ ಸರಕಾರಗಳು ತಾವು ನೀಡಿದ ಭರವಸೆಗಳನ್ನು ಈಡೇರಿಸುವ ವಿಚಾರ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ವಿಧಾನಸಭೆಯಲ್ಲಿ ಗುರುವಾರ ಜರುಗಿತು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಪ್ರಸ್ತಾಪಿಸಿ ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರಕಾರ ಸೂಕ್ತರ ರೀತಿಯಲ್ಲಿ ನೆರವು ಕೊಟ್ಟಿಲ್ಲ ಎಂದು ಉಲ್ಲೇಖಿಸಿದರು. ಈ ಮಾತಿಗೆ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎದ್ದು ನಿಂತ ಬಿಜೆಪಿಯ ಸದಸ್ಯ ಆರ್.ಅಶೋಕ್, ಈ ಹಿಂದೆ ಎನ್‍ಡಿಎ ಸರಕಾರದ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ. ಯುಪಿಎ ಸರಕಾರ ಎಷ್ಟು ಕೊಟ್ಟಿತ್ತು ಎಂಬುದನ್ನು ಹೋಲಿಕೆ ಮಾಡಿ ಹೇಳಿದ್ದೇನೆ. ಯುಪಿಎಗಿಂತ ಐದು ಪಟ್ಟು ಹೆಚ್ಚಿನ ನೆರವನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಟ್ಟಿದೆ ಎಂದರು.
ಆಗ ಮಧ್ಯಪ್ರವೇಶಿಸಿದ ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ‘75 ವರ್ಷದಲ್ಲಿ ಏನೂ ಆಗಿಲ್ಲ ಎಂಬ ರೀತಿ ಹೇಳುತ್ತೀರಿ. ನೀವು ಬಂದ ಮೇಲೆ ಎಲ್ಲ ಆಗಿರುವುದೇ? ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಜತೆಗೆ, ಬಿಜೆಪಿಯ ಶಾಸಕ ಅಶ್ವತ್ಥನಾರಾಯಣ, ಸುಳ್ಳು ಹೇಳಬೇಡಿ, ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ ಎಂದಾಗ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಇದೇ ವೇಳೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ, ಸತ್ಯಾಂಶ ಹೇಳುವಾಗ ಕೇಂದ್ರದ ಕಡೆ ಬೊಟ್ಟು ಹೇಳುತ್ತೀರಿ. ಅವರೆಲ್ಲ ಸ್ಪರ್ಧೆಯಲ್ಲಿದ್ದಾರೆ. ಹೆಚ್ಚು ಮಾತನಾಡಿದಷ್ಟು ಹೆಚ್ಚು ಅಂಕ ಬರುತ್ತದೆ. ಅದಕ್ಕಾಗಿ ಅವರು ಪದೇ ಪದೇ ಎದ್ದು ಮಾತನಾಡುತ್ತಾರೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಅಶ್ವತ್ಥನಾರಾಯಣ, ನೀವು ಕಾಂಗ್ರೆಸ್‍ಗೆ ಹೋಗಿದ್ದಕ್ಕೆ ಏನು ಬಹುಮಾನ ಸಿಕ್ಕಿದೆ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಸವದಿ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಆ ಕಡೆಯಿಂದ ಈ ಕಡೆ ಬಂದಿದ್ದೇನೆ ಎಂದು ಉತ್ತರಿಸಿದರು.
ಅಶ್ವತ್ಥನಾರಾಯಣನತ್ತ ನೋಡಿ ಉರಿಗೌಡ ಎಂದ ಕಾಂಗ್ರೆಸ್ ಶಾಸಕ..!
ಇದೇ ಚರ್ಚೆಯಲ್ಲಿ ಶಿವಲಿಂಗೇಗೌಡ, ಅಶ್ವತ್ಥನಾರಾಯಣರನ್ನು ಉದ್ದೇಶಿಸಿ, ‘ನಿಮಗೆ ತಾಕತ್ತಿದ್ದರೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ನಿಂತು ಗೆದ್ದು ತೋರಿಸಿ’ ಎಂದು ಸವಾಲು ಹಾಕಿದರು. ಇದಕ್ಕೆ ಅಶ್ವತ್ಥನಾರಾಯಣ ಅವರು ತಾಕತ್ತು ಜೆಡಿಎಸ್, ಇಲ್ಲ ಕಾಂಗ್ರೆಸ್‍ನದ್ದಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರಸ್ತಾಪಿಸಿ, ‘ಉರಿಗೌಡ, ಉರಿಗೌಡ’ ಎಂದು ಜೋರಾಗಿ ಅಶ್ವತ್ಥನಾರಾಯಣನತ್ತ ನೋಡಿ ಹೇಳಿದರು. ಆಗ ಅಶ್ವತ್ಥನಾರಾಯಣ, ಕೆಂಪೇಗೌಡ ಸಮಾಧಿನೇ ಇಲ್ಲ ಎಂದು ಹೇಳಿದವರು ನೀವು ಎಂದು ಆರೋಪಿಸಿದರು. ಆಗ ಬಾಲಕೃಷ್ಣ ಅವರು ಹಗರುವಾಗಿ ಮಾತನಾಡಬೇಡಿ. ಗೌರವಯುತವಾಗಿ ಮಾತನಾಡಿ ಎಂದಾಗ ಇಬ್ಬರ ನಡುವೆ ಏರಿದ ದನಿಯಲ್ಲಿ ವಾಗ್ವಾದ ಉಂಟಾಯಿತು.
ಮಾತನಾಡಲು ಬಿಡಿ ಎಂದ ಸಿಎಂ..!:
ಕಾಂಗ್ರೆಸ್, ಬಿಜೆಪಿ ಸದಸ್ಯರ ವಾಗ್ವಾದ ನಡುವೆ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ವಿರೋಧ ಪಕ್ಷದವರು ಮಾತನಾಡಿದ್ದಾರೆ. ಅಶ್ವತ್ಥನಾರಾಯಣ ಉಪಮುಖ್ಯಮಂತ್ರಿಯಾಗಿದ್ದವರು ಮಧ್ಯ ಮಧ್ಯೆ ಅಡ್ಡಿಪಡಿಸಿದರೆ ಹೇಗೆ? ಶಿವಲಿಂಗೇಗೌಡರು ಮಾತನಾಡಲು ಬಿಡಿ ಎಂದರು.
ಅದಕ್ಕೆ ಅಶ್ವತ್ಥನಾರಾಯಣ ಅವರು, ಶಿವಲಿಂಗೇಗೌಡರು ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುತ್ತಿಲ್ಲ, ಬಜೆಟ್ ಮೇಲೆ ಮಾತನಾಡುತ್ತಿದ್ದಾರೆ. ನೀವು ವಿರೋಧ ಪಕ್ಷದ ನಾಯಕರಾಗಿದ್ದಾಗ ಮಧ್ಯಪ್ರವೇಶ ಮಾಡುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯ ಮತ್ತೊಬ್ಬ ಶಾಸಕ ಸಿ.ಸಿ.ಪಾಟೀಲ್, ಮುಖ್ಯಮಂತ್ರಿಗಳು "ಡೋಂಟ್ ಅಲೌ ಹಿಮ್ ಟು ಸ್ಪೀಕ್" ಎಂದು ನಿರ್ದೇಶನ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಮುಖ್ಯಮಂತ್ರಿ ಇದು ಅಸಂಸದೀಯವೇ ಎಂದು ಪ್ರಶ್ನಿಸಿ, ‘ಪ್ಲೀಸ್ ಡೋಂಟ್ ಅಲೋ ಹಿಮ್ ಟು ಸ್ಪೀಕ್’ ಎಂದು ಹೇಳಿರುವುದಾಗಿ ಸಮರ್ಥಿಸಿಕೊಂಡರು.