ಆಕ್ಷೇಪಾರ್ಹ ಪದ ಬಳಕೆ | ಸಚಿವ ಮಲ್ಲಿಕಾರ್ಜುನ್ ವಿರುದ್ಧ ಪ್ರಕರಣ ದಾಖಲಿಸಲು ಹಿಂದೇಟು: ಆರೋಪ
ಬೆಂಗಳೂರು, ಆ.15: ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ರಾಜ್ಯ ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ವಿಧಾನಸೌಧ ಠಾಣಾ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಆರೋಪಿಸಿದೆ.
ಸಂದರ್ಶನವೊಂದರಲ್ಲಿ ಮಾತನಾಡುವಾಗ ಸಚಿವರು ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ರಾಜ್ಯ ತೋಟಗಾರಿಕಾ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿರುದ್ಧ ದೂರು ನೀಡಲು ಸಮಿತಿ ನೇತೃತ್ವದ ನಿಯೋಗ ಮಂಗಳವಾರ ದಿನಪೂರ್ತಿ ಠಾಣೆಯಲ್ಲಿ ಇದ್ದರೂ, ಪೊಲೀಸರು ದೂರು ಸ್ವೀಕರ ಮಾಡಲಿಲ್ಲ ಎಂದು ಸಮಿತಿಯ ಪಿ.ಯಶೋಧಾ ಹೇಳಿದ್ದಾರೆ.
ಮೊಕದ್ದಮೆ ದಾಖಲಿಸುವ ಕುರಿತು ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಅವರು ಹಿರಿಯ ಅಧಿಕಾರಿಗಳಿಂದ ಕಾನೂನು ಸಲಹೆ ಪಡೆಯುವುದಾಗಿ ನೆಪ ಹೇಳಿ ಸಮಯ ಕಳೆಯುತ್ತಿದ್ದಾರೆ.ಆದರೆ, ಪೊಲೀಸರು ಮೊಕದ್ದಮೆ ದಾಖಲಿಸಲು ಮುಂದಾಗದೆ, ಇದ್ದಲ್ಲಿ ನ್ಯಾಯಾಲಯದಲ್ಲಿ ನೇರವಾಗಿ ಮೊಕದ್ದಮೆ ಹೂಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.