ವಾಲ್ಮೀಕಿ ನಿಗಮದ ಹಗರಣ ಪ್ರಕರಣ : ಬಿ.ನಾಗೇಂದ್ರ ಮತ್ತೆ ಐದು ದಿನ ಈಡಿ ವಶಕ್ಕೆ

Update: 2024-07-18 13:46 GMT

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಮತ್ತೆ ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯ(ಈ.ಡಿ.)ದ ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.

ಈ.ಡಿ. ಕಸ್ಟಡಿ ಅಂತ್ಯವಾಗಿದ್ದ ಹಿನ್ನೆಲೆಯಲ್ಲಿ ಬಿ.ನಾಗೇಂದ್ರ ಅವರನ್ನು ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಪ್ರಕರಣ ಸಂಬಂಧ ಮತ್ತಷ್ಟು ವಿಚಾರಣೆ ಬಾಕಿಯಿರುವ ಕಾರಣ ಅವರನ್ನು ಮತ್ತೆ ವಶಕ್ಕೆ ನೀಡಬೇಕೆಂದು ಅಧಿಕಾರಿಗಳು ನ್ಯಾಯಾಧೀಶರಿಗೆ ಕೋರಿದರು. ಈ ಹಿನ್ನೆಲೆ ನಾಗೇಂದ್ರ ಅವರನ್ನು ಐದು ದಿನಗಳ ಕಾಲ ಈ.ಡಿ. ಅಧಿಕಾರಿಗಳ ವಶಕ್ಕೆ ಒಳಪಡಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂ. ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜು.12ರಂದು ನಗರದ ಡಾಲರ್ಸ್ ಕಾಲೋನಿಯಲ್ಲಿರುವ ನಾಗೇಂದ್ರ ಅವರ ನಿವಾಸದಲ್ಲಿ ಬಂಧಿಸಿದ್ದ ಈ.ಡಿ.ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಬಳಿಕ ಜುಲೈ 13ರಂದು ಸಂಪಿಗೆಹಳ್ಳಿಯಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜು.18ರವರೆಗೆ ವಶಕ್ಕೆ ಪಡೆದುಕೊಂಡಿದ್ದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ವರ್ಗಾವಣೆಯಾಗಿದ್ದ ಹಣ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮದ್ಯ ಖರೀದಿ ಮಾಡಿದ್ದಾರೆ. ಈ ಬಗ್ಗೆ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮತ್ತು ಮಾಜಿ ಸಚಿವ ಬಿ.ನಾಗೇಂದ್ರ ನಿವಾಸದಲ್ಲಿ ಮಹತ್ವದ ದಾಖಲೆಗಳ ಪತ್ತೆಯಾಗಿವೆ. ಒಟ್ಟು 89.65 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯವು ವಿಸ್ತೃತ ಮಾಧ್ಯಮ ಪ್ರಕಟನೆ ಮೂಲಕ ಮಾಹಿತಿ ನೀಡಿದೆ.

ವಾಲ್ಮೀಕಿ ಹಗರಣ ಸಂಬಂಧ ನಾಲ್ಕು ರಾಜ್ಯಗಳ 23 ಕಡೆ ದಾಳಿ ನಡೆಸಿದ್ದೇವೆ. 18 ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು, ನಂತರ ಹಲವು ನಕಲಿ ಖಾತೆಗಳಿಗೆ ಹೋಗಿ ನಗದು ಆಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಬಿ.ನಾಗೇಂದ್ರ, ಬಸನಗೌಡ ದದ್ದಲ್ ಮನೆಯಲ್ಲಿ ದಾಖಲೆಗಳು ಲಭ್ಯವಾಗಿವೆ ಎಂದು ಈ.ಡಿ. ಸ್ಪಷ್ಟಪಡಿಸಿದೆ.

ದದ್ದಲ್ ವಿಚಾರಣೆ: ನಿಗಮದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರನ್ನು ಈ.ಡಿ. ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದ್ದಾರೆ. ನಗರದ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾಗುವಂತೆ ಬಸನಗೌಡ ದದ್ದಲ್ ಅವರಿಗೆ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಗುರುವಾರ ಬೆಳಗ್ಗೆ 11.30ಕ್ಕೆ ದದ್ದಲ್ ಅವರು ಈ.ಡಿ. ಕಚೇರಿಗೆ ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News