ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ಸಿನವರು ಹೊಣೆಯರಿತು ಮಾತನಾಡಲಿ : ವಿಜಯೇಂದ್ರ

Update: 2025-04-24 19:17 IST
ಜವಾಬ್ದಾರಿಯುತ ಸ್ಥಾನದಲ್ಲಿರುವ ಕಾಂಗ್ರೆಸ್ಸಿನವರು ಹೊಣೆಯರಿತು ಮಾತನಾಡಲಿ : ವಿಜಯೇಂದ್ರ
  • whatsapp icon

ಬೆಂಗಳೂರು : ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ಹೊಣೆಯರಿತು ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಕೇಂದ್ರದ ಬೇಹುಗಾರಿಕಾ ವೈಫಲ್ಯಗಳ ಬಗ್ಗೆ ಮಾತನಾಡುತ್ತೀರಿ. ಕಾಂಗ್ರೆಸ್ಸಿನವರು ಸ್ವಾತಂತ್ರ್ಯ ಬಂದ ಬಳಿಕ ಈ ದೇಶವನ್ನು 60 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಭಯೋತ್ಪಾದನೆಯನ್ನು ಈ ದೇಶದಿಂದ ಕಿತ್ತು ಹಾಕಲು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಸಾಧ್ಯವಾಗಿಲ್ಲ? ಎಂದು ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ಪ್ರಶ್ನೆ ಮಾಡಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.

ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯರೂ ಒಟ್ಟಾಗಿ, ಒಂದಾಗಿ ನಿಲ್ಲಬೇಕಾಗಿದೆ. ಈ ಜಗತ್ತಿಗೆ ಒಂದು ಸ್ಪಷ್ಟ ಸಂದೇಶ ನೀಡಬೇಕಾಗಿದೆ. ಭಯೋತ್ಪಾದನೆ ಎಂಬುದು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ, ಇದು ಜಾಗತಿಕ ಸಮಸ್ಯೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ಹೋದರೂ ಉಗ್ರವಾದವನ್ನು ಜಗತ್ತು ಖಂಡಿಸಬೇಕು, ಬುಡಸಮೇತ ಕಿತ್ತು ಹಾಕಬೇಕೆಂದು ಬಲವಾಗಿ ಪ್ರತಿಪಾದನೆ ಮಾಡುತ್ತಿರುತ್ತಾರೆ ಎಂದು ವಿಜಯೇಂದ್ರ ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟ್ವೀಟ್ ನೋಡಿ. ಅದರಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾಗಿ ಹೇಳಿದ್ದಾರೆ. ಪಾಪ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿಂದೂ ಎಂದು ಅನಿಸಲೇ ಇಲ್ಲ. ಉಗ್ರರು ಪ್ರತಿಯೊಬ್ಬರನ್ನು ಶೂಟ್ ಮಾಡಬೇಕಾದರೆ ಹಿಂದೂವೇ, ಮುಸಲ್ಮಾನರೇ ಎಂದು ಪತ್ತೆ ಹಚ್ಚಿ ಗುಂಡಿಟ್ಟು ಸಾಯಿಸಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇವಲ ಭಾರತೀಯ ಪ್ರವಾಸಿಗರಷ್ಟೇ ಕಾಣುತ್ತಿದ್ದಾರೆ. ಕಾಂಗ್ರೆಸ್ಸಿನವರಿಗೆ ಹಿಂದೂಗಳು ಕಾಣುತ್ತಿಲ್ಲ. ಇದು ದೇಶದ ದುರ್ದೈವ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.

ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯನ್ನು ಮೋದಿ ಸರಕಾರವು ಗಂಭೀರವಾಗಿ ಪರಿಗಣಿಸಿದೆ. ಸಂವಿಧಾನದ ವಿಧಿ 370 ರದ್ದತಿ ಹಿಂದೆ ಕಾಶ್ಮೀರವನ್ನು ಸಹಜ ಸ್ಥಿತಿಗೆ ತರುವ ಸದುದ್ದೇಶ ಇತ್ತು. ಪ್ರವಾಸಿಗರನ್ನು ಗುರಿ ಮಾಡಿ, ಜಮ್ಮು ಕಾಶ್ಮೀರಕ್ಕೆ ವಿದೇಶಿ ಪ್ರವಾಸಿಗರು ಬರಬಾರದು, ಅಲ್ಲಿನ ಯುವಕರಿಗೆ ಉದ್ಯೋಗ ಸಿಗಬಾರದು, ಯುವಜನತೆ ಬೀದಿಗೆ ಬಂದು ಅವರನ್ನು ಭಯೋತ್ಪಾದನೆಗೆ ಬಳಸಿಕೊಳ್ಳಬೇಕೆಂಬ ದುರುದ್ದೇಶ ಇದರ ಹಿಂದಿದೆ ಎಂಬ ಚರ್ಚೆಗಳು ನಡೆದಿವೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News