ಕೆಎಎಸ್ ಮರುಪರೀಕ್ಷೆ ನಡೆಸಿ : ಸಿಎಂಗೆ ಪತ್ರ ಬರೆದ ವಿಜಯೇಂದ್ರ
ಬಿ.ವೈ.ವಿಜಯೇಂದ್ರ
ಬೆಂಗಳೂರು: ‘ಕೆಎಎಸ್ ಪರೀಕ್ಷೆ’ ಗೊಂದಲದ ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಶನಿವಾರ ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ವಿಜಯೇಂದ್ರ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಎಎಸ್ ಪೂರ್ವಬಾವಿ ಪರೀಕ್ಷೆಯಲ್ಲಿನ ಮರುಪರೀಕ್ಷೆಯ 2 ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್‍ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯಮಾಡಿದೆ ಎಂದು ದೂರಿದ್ದಾರೆ.
ಕೆಪಿಎಸ್‍ಸಿಯ ನಿರಂತರ ಯಡವಟ್ಟುಗಳನ್ನು ಸಹಿಸದೇ ಪರೀಕ್ಷಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿಂದೆ ಸಿಎಂ ಸದನದಲ್ಲಿ ಹೇಳಿದ್ದಂತೆ ನ್ಯಾಯಾಲಯದ ತೀರ್ಪು ಬಂದ ಕೂಡಲೇ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ತಿಳಿಸಿದ್ದರು. ಸದ್ಯ ಘನ ನ್ಯಾಯಾಲಯ 32 ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿದೆ.
ಆದರೆ ಉಳಿದ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಿ ಎಲ್ಲ ಅಭ್ಯರ್ಥಿಗಳಿಗೂ ಮರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು ನ್ಯಾಯೋಜಿತ ಕ್ರಮವಾಗಿರುತ್ತದೆ, ಈ ಕುರಿತು ಸಿಎಂ ಸಿದ್ದರಾಮಯ್ಯನವರು ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿಜಯೇಂದ್ರ ಪತ್ರದಲ್ಲಿ ಆಗ್ರಹಿಸಿದ್ದಾರೆ.