ಗ್ರಾಮ ಆಡಳಿತ ಅಧಿಕಾರಿ ಹುದ್ದೆ : ಅರ್ಜಿ ಅಂಗೀಕೃತವಾಗಿರದಿದ್ದರೆ ದಾಖಲೆ ಸಲ್ಲಿಸಲು ಆ.26 ಕೊನೆಯ ದಿನ

Update: 2024-08-20 15:40 GMT

ಬೆಂಗಳೂರು : ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಸಲ್ಲಿಸಿರುವ ಅರ್ಜಿ ಅಂಗೀಕೃತ ವಾಗಿರದಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಆ.26ರೊಳಗೆ ಪೂರಕ ದಾಖಲೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಸಲ್ಲಿಸಬೇಕಾಗಿರುತ್ತದೆ.

ಸೋಮವಾರ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಪ್ರಕಟಣೆ ಹೊರಡಿಸಿದ್ದು, ಪ್ರಾಧಿಕಾರವು ಪೂರಕ ದಾಖಲೆಗಳನ್ನು ಪರಿಗಣಿಸಿ ಅರ್ಜಿಗಳನ್ನು ದೃಢೀಕರಿಸಲಿದೆ. ಅರ್ಜಿದಾರರು ತಮ್ಮ ಅರ್ಜಿ ಸ್ಥಿತಿಯನ್ನು ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಲಿಂಕ್ ಮೂಲಕ ಪರಿಶೀಲಿಸಬಹುದು ಎಂದು ಅವರು ಹೇಳಿದ್ದಾರೆ.

ಕಡ್ಡಾಯ ಕನ್ನಡ ಪರೀಕ್ಷೆ: ಹುದ್ದೆಗೆ ಅರ್ಜಿ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಲೇಬೇಕು. ಸೆ.29ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ಈ ಪರೀಕ್ಷೆಗೆ ತಪ್ಪದೇ ಹಾಜರಾಗಬೇಕು. ಕರ್ನಾಟಕ ನಾಗರಿಕ ಸೇವಾ(ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರ ಅನ್ವಯ, ಕನ್ನಡ ಭಾಷಾ ಪರೀಕ್ಷೆಯಲ್ಲಿ 150 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅ.27ರಂದು ಪತ್ರಿಕೆ- 1 ಮತ್ತು ಪತ್ರಿಕೆ-2 ಇವುಗಳನ್ನು ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News