‘ವಕ್ಫ್(ತಿದ್ದುಪಡಿ) ಮಸೂದೆ 2024’ ವಿರುದ್ಧ ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲೇನಿದೆ?

ಬೆಂಗಳೂರು : ಕೇಂದ್ರ ಸರಕಾರವು ‘ವಕ್ಫ್(ತಿದ್ದುಪಡಿ) ಮಸೂದೆ 2024’ ಅನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಆಗ್ರಹಿಸಿ ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಬುಧವಾರ ವಿಧಾನಸಭೆಯ ಅಧಿಕೃತ ನಿರ್ಣಯ ಮಂಡನೆ ಕಲಾಪದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಖಾತೆ ಸಚಿವ ಎಚ್.ಕೆ.ಪಾಟೀಲ್ ನಿರ್ಣಯವನ್ನು ಮಂಡಿಸಿದರು.
ನಿರ್ಣಯದಲ್ಲಿ ಏನಿದೆ :
ಕೇಂದ್ರ ಸರಕಾರವು 1995ರ ವಕ್ಸ್ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ. (ಕೇಂದ್ರ ಸರಕಾರದ ಕಾಯ್ದೆ ಸಂಖ್ಯೆ 43-1995) ಈ ಉದ್ದೇಶಕ್ಕಾಗಿ -ಒಂದು ಜಂಟಿ ಸದನಸಮಿತಿಯನ್ನು 2024 ರಲ್ಲಿ ಸಂಸತ್ತಿನ ಮೂಲಕ ರಚನೆಗೊಂಡಿತ್ತು. ಈ ಸಂಸದೀಯ ಸಮಿತಿಯು ಸಂಸತ್ತಿನ ಉನ್ನತ ಸಂಪ್ರದಾಯಗಳನ್ನು ಬದಿಗೊತ್ತಿ ವಿರೋಧ ಪಕ್ಷದ ಸದಸ್ಯರ ಯಾವುದೇ ಅಭಿಪ್ರಾಯವನ್ನು ಪರಿಗಣಿಸದೇ, ಲೆಕ್ಕಿಸದೇ ಏಕಪಕ್ಷಿಯವಾಗಿ ಮನಬಂದಂತೆ ವರ್ತಿಸಿ, ಈ ಕಾಯ್ದೆ ತಿದ್ದುಪಡಿಗೆ ಕೆಲವು ಬದಲಾವಣೆಗಳನ್ನು ಶಿಫಾರಸ್ಸು ಮಾಡಿ, ಸಂಸತ್ತಿಗೆ ವರದಿ ಸಲ್ಲಿಸಿ, ಈಗ ಮಸೂದೆಯನ್ನು ಸಂಸತ್ತಿನ ಅಂಗೀಕಾರಕ್ಕೆ ಮಂಡಿಸಲಾಗಿದೆ.
ಜಂಟಿ ಸಂಸದೀಯ ಸಮಿತಿಯ ಆಹ್ವಾನದಂತೆ ವಿವಿಧ ಪಾಲುದಾರರು, ರಾಜ್ಯ ವಕ್ಫ್ ಮಂಡಳಿಗಳು ಮತ್ತು ವಿವಿಧ ಸಂಸ್ಥೆಗಳು ಅಭಿಪ್ರಾಯಗಳನ್ನು ಮಂಡಿಸಿವೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಮತ್ತು ವಿವಿಧ ಸಂಸ್ಥೆಗಳು ಹಾಗೂ ಪಾಲುದಾರರು ಈ ಕಾಯ್ದೆ ತಿದ್ದುಪಡಿಯನ್ನು ಕೈಗೊಳ್ಳಬಾರದು ಎಂದು ವಿರೋಧಿಸಿ ಅಭಿಪ್ರಾಯಗಳನ್ನು ನೀಡಿದಾಗ್ಯೂ ಈ ಕಾಯ್ದೆಯನ್ನು ಏಕಪಕ್ಷಿಯವಾಗಿ ತರಲು ನಿರ್ಧರಿಸಲಾಗಿದೆ ಹಾಗೂ ಸಂಸತ್ತಿನಲ್ಲಿ ಮಂಡಿಸಲಾಗಿದೆ.
ರಾಜ್ಯ ವಕ್ಫ್ ಮಂಡಳಿಯು 1995ರ ಸದರಿ ಕಾಯಿದೆ (2013 ರಲ್ಲಿ ತಿದ್ದುಪಡಿಗೊಂಡಂತೆ) ಮತ್ತು ಇಲ್ಲಿಯವರೆಗೆ ಸದರಿ ಕಾಯಿದೆಗೆ ಮಾಡಲಾದ ತಿದ್ದುಪಡಿಗಳ ಪ್ರಕಾರ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಚರ ಅಥವಾ ಸ್ಥಿರ ಆಸ್ತಿ ಮತ್ತು ವಸ್ತುಗಳ ಅಭಿರಕ್ಷಕರಾಗಿ ಕಾರ್ಯನಿರ್ವಹಿಸುತ್ತಿವೆ, ಮತ್ತು ನಮೂದು 28, ದತ್ತಿ ಸಂಸ್ಥೆಗಳು, ದತ್ತಿ ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳು (ದತ್ತಿ ಮತ್ತು ದತ್ತಿ ಸಂಸ್ಥೆಗಳು, ದತ್ತಿ ಮತ್ತು ಧಾರ್ಮಿಕ ದತ್ತಿಗಳು ಮತ್ತು ಧಾರ್ಮಿಕ ಸಂಸ್ಥೆಗಳು) ಭಾರತದ ಸಂವಿಧಾನದ ಪಟ್ಟಿಯಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರಕಾರದ ಸಮಾನ ಜವಾಬ್ದಾರಿಯ ಏಕಕಾಲಿಕ ಪಟ್ಟಿಯ ಸೇರಿಸಲ್ಪಟ್ಟಿರುವುದರಿಂದ ಹಾಗೂ ಶಾಸನಾತ್ಮಕ ಅಧಿಕಾರವನ್ನು ಚಲಾಯಿಸುವ ಮೂಲಕ ಅಂಗೀಕರಿಸಲಾಗಿದೆ.
ಸಂವಿಧಾನದ 3ನೇ ಪಟ್ಟಿಯಲ್ಲಿ ವಕ್ಫ್ ವಿಷಯ ಉಲ್ಲೇಖಿತವಾಗಿರುವುದಿಲ್ಲ. ವಕ್ಫ್ ಒಂದು ವಿಶೇಷ ಪರಿಕಲ್ಪನೆಯಾಗಿದೆ ಹಾಗೂ ಅದು ಕೇಂದ್ರ ಸರಕಾರದ ಪ್ರತ್ಯೇಕ ವ್ಯಾಪ್ತಿಗೆ ಒಳಪಡುವ ವಿಷಯವಾಗಿರುವುದಿಲ್ಲ. ಬದಲಿಗೆ, ರಾಜ್ಯ ಸರಕಾರದ ಪ್ರತ್ಯೇಕ ಹಾಗೂ ವಿಶೇಷ ಅಧಿಕಾರಕ್ಕೆ ಒಳಪಡುವ 11ನೇ ಪಟ್ಟಿಯಲ್ಲಿ ನಮೂದು ಸಂಖ್ಯೆ 10 ರಲ್ಲಿ ಸ್ಮಶಾನ/ಖಬರಸ್ಥಾನಗಳು ಹಾಗೂ ನಮೂದು ಸಂಖ್ಯೆ 45 ರಲ್ಲಿ ಭೂಮಿ, ಭೂಮಿ ಅಳತೆ, ಭೂ ದಾಖಲೆಗಳು ಈ ವಿಷಯಗಳು ಒಳಪಟ್ಟಿದ್ದು ಅವುಗಳ ಕುರಿತು ತಿದ್ದುಪಡಿ ತರುವ ಅಧಿಕಾರ ಕೇಂದ್ರ ಸರಕಾರಕ್ಕೆ ಇರುವುದಿಲ್ಲ. ಈ ತಿದ್ದುಪಡಿಯ ಮೂಲಕ ಉದ್ದೇಶಿತ ವಕ್ಫ್ ಕಾಯ್ದೆಯ ತಿದ್ದುಪಡಿಯು ರಾಜ್ಯ ಸರಕಾರದ ಕಾರ್ಯಾಂಗದ ಮತ್ತು ಶಾಸನಾತ್ಮಕ ಅಧಿಕಾರ ವ್ಯಾಪ್ತಿಯನ್ನು ಕಬಳಿಸುತ್ತಿದೆ ಮತ್ತು ಮೊಟುಕುಗೊಳಿಸುತ್ತದೆ. ಈ ಉದ್ದೇಶಿತ ತಿದ್ದುಪಡಿಯು "Principle of Equity, Equality and parity" ತತ್ವಗಳಿಗೆ ವಿರುದ್ಧವಾಗಿದೆ. ಹಾಗಾಗಿ ಈ ಉದ್ದೇಶಿತ ತಿದ್ದುಪಡಿಯು ಸಂವಿಧಾನ ಬಾಹಿರವಾಗಿದೆ (Ultra vires).
ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ವಕ್ಫ್ ಸಮಾನ ಶಾಸನಾತ್ಮಕ ಅಧಿಕಾರದ ವಿಷಯವಾಗಿರುವುದರಿಂದ, ಭಾರತದ ಸಂವಿಧಾನದ 26 ನೇ ವಿಧಿಯು ವಕ್ಫ್ ದತ್ತಿಗಳು ಮತ್ತು ವಕ್ಫ್ ಸಂಸ್ಥೆಗಳ ಹಕ್ಕುಗಳನ್ನು ರಕ್ಷಿಸಲು ಮತ್ತು ಆಯಾ ಧಾರ್ಮಿಕ ಸಮುದಾಯಗಳಿಗೆ ಅದರ ಸ್ವಾತಂತ್ರ್ಯವನ್ನು ಸುನಿಶ್ಚಿತಗೊಳಿಸಲು ಸಂವಿಧಾನದತ್ತ ಮೂಲಭೂತ ಹಕ್ಕಾಗಿದೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ವಕ್ಫ್ ಕಾಯ್ದೆಯು 1954 ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ ಬಲಯುತವಾದ ಕಾನೂನಾಗಿದ್ದು, ನಂತರ 1995 ರಲ್ಲಿ ಸಮಗ್ರವಾಗಿ ತಿದ್ದುಪಡಿಯಾಗಿದೆ.
ಪ್ರಸ್ತುತ, ತಿದ್ದುಪಡಿ ಮಸೂದೆಯಲ್ಲಿ ಮಂಡಿಸಲಾದ ನಿಬಂಧನೆಗಳು ವಕ್ಫ್ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯ ಸರಕಾರಗಳಿಂದ ಅನೇಕ ಅಧಿಕಾರಗಳನ್ನು ಕಸಿದುಕೊಳ್ಳುತ್ತವೆ ಮತ್ತು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ತತ್ವಗಳು ಮತ್ತು ವಕ್ಫ್‌ನ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುವ ಮಂಡಳಿಗಳಿಗೆ ಸಂಪೂರ್ಣ ವಿರುದ್ಧವಾಗಿವೆ. ಈ ತಿದ್ದುಪಡಿಗೆ ಸಂಬಂಧಪಟ್ಟ ವಿಷಯದಲ್ಲಿ ವಕ್ಫ್ ಮತ್ತು ವಕ್ಫ್ ನ್ಯಾಯಮಂಡಳಿಯ ಮೇಲ್ವಿಚಾರಣೆಗೆ ಜವಾಬ್ದಾರರಾಗಿರುವ ಮಂಡಳಿಗಳ ಕಾರ್ಯಗಳು ಮತ್ತು ಅಧಿಕಾರಗಳನ್ನು ದುರ್ಬಲಗೊಳಿಸುತ್ತದೆ ಅಥವಾ ರದ್ದುಗೊಳಿಸುತ್ತದೆ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ದೃಷ್ಟಿಕೋನ ಹೊಂದಿದೆ.
ಈ ಕಾನೂನಿನ ತಿದ್ದುಪಡಿಯು ಕಾನೂನಿನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಮೊಟಕುಗೊಳಿಸುತ್ತದೆ. ಏಕೆಂದರೆ ಮಂಡಳಿಯು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸದಸ್ಯರನ್ನು ಹೊರತುಪಡಿಸಿ ನಾಮನಿರ್ದೇಶಿತ ಸದಸ್ಯರು ಮತ್ತು ನಾಮನಿರ್ದೇಶಿತ ಅಧ್ಯಕ್ಷರನ್ನು ಮಾತ್ರ ಹೊಂದಿರುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ.
ಅದೇ ರೀತಿ, ಹೊಸ ತಿದ್ದುಪಡಿಯು ಸಂವಿಧಾನವು ನೀಡಿರು ವಕ್ಫ್ ತತ್ವಗಳು, ಮೂಲಭೂತ ಹಕ್ಕುಗಳು, ಸ್ವಾತಂತ್ರ್ಯ ಒಕ್ಕೂಟ ವ್ಯವಸ್ಥೆ ಜಾತ್ಯತೀತತೆ, ಪ್ರಜಾಪ್ರಭುತ್ವ ನಾಗರಿಕ ನಂಬಿಕೆಯ ಹಕ್ಕಿನೊಂದಿಗೆ ಅಸಮಂಜಸತೆಯನ್ನು ಸೃಷ್ಟಿಸುತ್ತದೆ.
ಸಂವಿಧಾನವು ಅನುಮತಿಸುವ ಮೂಲಭೂತ ಹಕ್ಕುಗಳು, ಸ್ವಾತಂತ್ರ, ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ ಪ್ರಜಾಪ್ರಭುತ್ವ ಮತ್ತು ನಾಗರಿಕರ ನಂಬಿಕೆಯ ಹಕ್ಕಿನ ಮೇಲೆ ಯಾವುದೇ ರಾಜಿ ಮಾಡಿಕೊಳ್ಳಬಾರದು. ಈ ಎಲ್ಲಾ ಸಾಂವಿಧಾನಿಕ ಮೌಲ್ಯಗಳನ್ನು ನಾವು ರಕ್ಷಿಸಬೇಕಾದ್ದುದು ರಾಜ್ಯಗಳ ಕರ್ತವ್ಯವಾಗಿದೆ.
ಈ ಕಾಯ್ದೆಯು ದೇಶದ ಎಲ್ಲಾ ವರ್ಗಗಳ ಜನತೆಯ ಆಶೋತ್ತರಗಳನ್ನು ಮತ್ತು ಅವಕಾಶಗಳನ್ನು ಪ್ರತಿಬಿಂಬಿಸುವುದಿಲ್ಲ. ಕರ್ನಾಟಕ ನಾಡಿನ ಜನತೆಯ ಸರ್ವಾನುಮತದ ಅಪೇಕ್ಷೆ-ನಿರೀಕ್ಷೆಗಳಿಗೆ ಮತ್ತು ಜಾತ್ಯತೀತ ತತ್ವಗಳಿಗೆ ಸಂಪೂರ್ಣವಾದ ವಿರೋಧ ವ್ಯಕ್ತಪಡಿಸುವ ಕಾಯ್ದೆಯಾಗಿರುವುದರಿಂದ ಈ ಸದನವು ವಕ್ಫ್ ಕಾಯ್ದೆ ತಿದ್ದುಪಡಿಯನ್ನು ಸರ್ವಾನುಮತದಿಂದ ತಿರಸ್ಕರಿಸುತ್ತದೆ.
ಈ ಹಿನ್ನೆಲೆಯಲ್ಲಿ, ಸಂವಿಧಾನದ ಮೂಲಭೂತ ತತ್ವಗಳನ್ನು ಉಲ್ಲಂಘಿಸುವ ನಿಬಂಧನೆಗಳನ್ನು ಒಳಗೊಂಡಿರುವ ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ತಕ್ಷಣ ಹಿಂಪಡೆಯುವ ಮೂಲಕ ದೇಶದ ಸರ್ವಾನುಮತದ ಅಭಿಪ್ರಾಯಗಳನ್ನು ಗೌರವಿಸಲು ಕೇಂದ್ರ ಸರಕಾರವು ವಿಳಂಬವಿಲ್ಲದೇ ಕ್ರಮ ಕೈಗೊಳ್ಳಬೇಕೆಂದು ಈ ಸದನವು ಕೇಂದ್ರ ಸರಕಾರವನ್ನು ಸರ್ವಾನುಮತದಿಂದ ಆಗ್ರಹಿಸುತ್ತದೆ.