ರೈತರಿಗೆ ಮಂಜೂರಾದ ಭೂಮಿಯನ್ನು ವಕ್ಫ್ ಬೋರ್ಡ್ ಹಿಂಪಡೆಯುತ್ತಿಲ್ಲ : ಸಚಿವ ಕೃಷ್ಣ ಬೈರೇಗೌಡ

Update: 2024-10-28 15:41 GMT

ಬೆಂಗಳೂರು: ಭೂ ಸುಧಾರಣೆ ಕಾಯ್ದೆ ಹಾಗೂ ಇನಾಮ್ ರದ್ಧತಿ ಕಾಯ್ದೆಯಡಿ ವಿಜಯಪುರದಲ್ಲಿ ರೈತರಿಗೆ ಮಂಜೂರು ಆಗಿರುವ ಭೂಮಿಯನ್ನು ವಕ್ಫ್ ಬೋರ್ಡ್ ಹಿಂಪಡೆಯುತ್ತಿಲ್ಲ. ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಬಿ.ವೈ.ವಿಜಯೇಂದ್ರ ನಡುವಿನ ಸಂಘರ್ಷದಿಂದಾಗಿ ಇದಕ್ಕೆ ವಿವಾದದ ರೂಪ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠೀಯನ್ನುದ್ದೇಶಿಸಿ ಮಾತನಾಡಿದ ಅವರು, 1973-74ರಲ್ಲಿ ವಿಜಯಪುರ ಜಿಲ್ಲೆಯಲ್ಲಿ 14,201 ಎಕರೆ ವಕ್ಫ್ ಆಸ್ತಿ ಎಂದು ಅಧಿಸೂಚನೆ ಆಗಿದೆ. ಈ ಪೈಕಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಮ್ಯುಟೇಷನ್ ಆಗಿರುವುದು ಕೇವಲ 773 ಎಕರೆ ಮಾತ್ರ ಎಂದು ಹೇಳಿದರು.

ಭೂ ಸುಧಾರಣೆ ಕಾಯ್ದೆಯಡಿ 11,835 ಎಕರೆ, ಇನಾಮ್ ರದ್ಧತಿ ಕಾಯ್ದೆಯಡಿ 1459 ಎಕರೆ 26 ಗುಂಟೆ ರೈತರಿಗೆ ಮಂಜೂರಾಗಿದೆ. 133 ಎಕರೆ 17 ಗುಂಟೆ ಬೆರೆ ಬೇರೆ ಯೋಜನೆಗಳಿಗೆ ಭೂ ಸ್ವಾಧೀನವಾಗಿ ಪರಿಹಾರ ನೀಡಲಾಗಿದೆ. ಈ ಮೂರು ವಿಭಾಗಗಳಲ್ಲಿ ಹಂಚಿಕೆಯಾಗಿರುವ ಭೂಮಿಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ರೈತರಿಗೆ ಮಂಜೂರಾಗಿರುವ ಜಮೀನನ್ನು ವಾಪಸ್ ಪಡೆಯುವ ಉದ್ದೇಶವೂ ಸರಕಾರಕ್ಕಾಗಲಿ, ವಕ್ಫ್ ಸಚಿವರಿಗಾಗಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಉಳಿದಿರುವ 1319 ಎಕರೆ ಭೂಮಿಯು ಯಾರ ಅನುಭೋದಲ್ಲಿಯೂ ಇಲ್ಲ. ಅದು ಯಾರಿಗೂ ಮಂಜೂರು ಆಗಿಲ್ಲ. ಮುಸ್ಲಿಮ್ ಸಮುದಾಯದ ವಿವಿಧ ಸಂಸ್ಥೆಗಳು, ಮುತವಲ್ಲಿಗಳ ಹೆಸರಿನಲ್ಲಿದೆ. ಅವುಗಳನ್ನು ಇಂದೀಕರಣ ಮಾಡುವುದರಿಂದ ಒಬ್ಬ ರೈತನಿಗೂ ಅನ್ಯಾಯವಾಗುವುದಿಲ್ಲ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಇಂಡಿ ತಾಲೂಕಿನಲ್ಲಿ ರೈತರಿಗೆ ನೋಟಿಸ್ ನೀಡದೆ 41 ಆಸ್ತಿಗಳನ್ನು ಅಲ್ಲಿನ ತಹಶೀಲ್ದಾರ್ ಇಂದೀಕರಣ ಮಾಡಿದ್ದು ಕರ್ತವ್ಯ ಲೋಪವಾಗಿದೆ. ಈಗಾಗಲೆ, ಸಹಾಯಕ ಆಯುಕ್ತರು ಅದನ್ನು ರದ್ದು ಮಾಡಿ, ತಹಶೀಲ್ದಾರ್‌ಗೆ ರೈತರ ಅಹವಾಲು ಆಲಿಸಲು ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಹೊನವಾಡ ಗ್ರಾಮದಲ್ಲಿ 1200 ಎಕರೆ ಜಮೀನನ್ನು ವಕ್ಫ್‌ಗೆ ಸೇರಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. 1974ರಲ್ಲಿ ಮಹಲ್ ಬಗಾಯತ್ ಎಂಬ ಗ್ರಾಮದ ದಾಖಲೆಗಳಲ್ಲಿ ಬ್ರ್ಯಾಕೆಟ್‍ನಲ್ಲಿ ಹೊನವಾಡ ಎಂದು ಸೇರಿಸಲಾಗಿತ್ತು. ಅದನ್ನು 1977ರಲ್ಲಿ ವಕ್ಫ್ ಬೋರ್ಡ್‍ನವರೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹೊನವಾಡ ಎಂಬುದನ್ನು ತೆಗೆಸಿದ್ದಾರೆ. ಸರಕಾರ ಅಧಿಸೂಚನೆಯೂ ಹೊರಡಿಸಿದೆ ಎಂದು ಅವರು ವಿವರಿಸಿದರು.

ಹೊನವಾಡದಲ್ಲಿ ವಕ್ಫ್ ಭೂಮಿ ಇರುವುದು 11 ಎಕರೆ ಮಾತ್ರ. ಈ ಬಗ್ಗೆ ವ್ಯವಸ್ಥಿತವಾಗಿ ಗೊಂದಲ ಮೂಡಿಸಿ, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿಸಿ, ಜನರ ನಡುವೆ ಸಂಘರ್ಷ ಉಂಟು ಮಾಡಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಇದು ಯತ್ನಾಳ್ ಹಾಗೂ ವಿಜಯೇಂದ್ರ ನಡುವಿನ ರಾಜಕೀಯ ಸಂಘರ್ಷದ ಪ್ರತಿಬಿಂಬ ಎಂದು ಕೃಷ್ಣ ಬೈರೇಗೌಡ ಟೀಕಿಸಿದರು.

ವಿಜಯಪುರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗುವುದು. ಅದರಲ್ಲಿ, ಸಹಾಯಕ ಆಯುಕ್ತರು, ಎಲ್ಲ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ವಕ್ಫ್ ಅಧಿಕಾರಿಗಳು ಇರುತ್ತಾರೆ. 1973-74ರಲ್ಲಿ ಅಧಿಸೂಚನೆಯಾಗುವ ಪೂರ್ವದಲ್ಲಿನ ದಾಖಲೆಗಳನ್ನು ರೈತರು ಸಲ್ಲಿಸಿದರೆ, ಅಂತಹ ಅಧಿಸೂಚಿತ ಜಾಗಗಳನ್ನು ಕೈ ಬಿಡಲು ಸರಕಾರ ಸಿದ್ಧವಿದೆ ಎಂದು ಅವರು ಹೇಳಿದರು.

ಅಧಿಸೂಚಿತವಾಗಿದ್ದ ಭೂಮಿಯ ಇಂದೀಕರಣ ಆಗಬೇಕಿತ್ತು. ಆದರೆ, ಕಂದಾಯ ಇಲಾಖೆಯವರು ಮಾಡಿಲ್ಲ, ವಕ್ಫ್ ಇಲಾಖೆಯವರು ಮಾಡಿಸಿಕೊಂಡಿಲ್ಲ. ಬಗರ್‍ಹುಕುಂ ಸಮಿತಿ, ನ್ಯಾಯಾಧೀಕರಣಗಳಲ್ಲಿ ರೈತರಿಗೆ ಮಂಜೂರು ಆಗಿರುವ ಭೂಮಿಯನ್ನು ಹಿಂಪಡೆಯುವುದಿಲ್ಲ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಅಧೀನದಲ್ಲಿರುವುದು 773 ಎಕರೆ ಮಾತ್ರ ಇದೆ. ಬಿಜೆಪಿಯವರು 1974ರ ಅಧಿಸೂಚನೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. 1974ಕ್ಕಿಂತ ಮುಂಚಿತವಾದ ದಾಖಲೆಗಳಿದ್ದರೆ ಅದನ್ನು ಕಾರ್ಯಪಡೆ ಎದುರು ಹಾಜರುಪಡಿಸಬಹುದು. ಅಲ್ಲದೇ, 1964 ರಿಂದ 1974ರವರೆಗಿನ ವಕ್ಫ್ ಆಸ್ತಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಬಿಜೆಪಿಯ ಪೂರ್ವ ತಯಾರಿ: ಕೇಂದ್ರದಲ್ಲಿ ವಕ್ಫ್ ಮಸೂದೆ ತರಲು ಬಿಜೆಪಿ ಮುಂದಾಗಿದೆ. ಅದಕ್ಕೆ ಪೂರ್ವ ತಯಾರಿ ಇದಾಗಿದೆ. ಮಹಾರಾಷ್ಟ್ರ, ಜಾರ್ಖಂಡ್‍ನಲ್ಲಿ ವಿಧಾನಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ, ಬಿಜೆಪಿಯವರು ರಾಜಕೀಯವಾಗಿ ಇಂತಹ ವಾತಾವರಣ ಸೃಷ್ಟಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದರು.

ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ, ವಕ್ಫ್ ಭೂಮಿ ಸಮುದಾಯದ ದಾನಿಗಳು ದಾನ ಮಾಡಿರುವಂತದ್ದು. ವಕ್ಫ್ ಭೂಮಿ ಸರಕಾರ ನೀಡಿರುವುದು ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಸ್ಮಶಾನ ಹೊರತುಪಡಿಸಿ ವಕ್ಫ್ ಅಧೀನದಲ್ಲಿ ಸರಕಾರದ ಒಂದು ಇಂಚು ಜಾಗವೂ ಇಲ್ಲ. 1.12 ಲಕ್ಷ ಎಕರೆ ವಕ್ಫ್ ಭೂಮಿ ದಾನವಾಗಿ ಬಂದಿದೆ. ಅದರಲ್ಲಿ ಉಳಿದಿರುವ 23,860 ಎಕರೆ ಮಾತ್ರ. ಅದನ್ನು ಉಳಿಸಲು ವಕ್ಫ್ ಅದಾಲತ್‍ಗಳನ್ನು ಪ್ರತಿಯೊಂದು ಜಿಲ್ಲೆಯಲ್ಲಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಅ.9ರಂದು ಬಿಜಾಪುರದಲ್ಲಿ ವಕ್ಫ್ ಅದಾಲತ್ ಮಾಡಿದಾಗ ಬಿಜೆಪಿ ಶಾಸಕ ಯತ್ನಾಳ್ ಅವರಿಗೂ ಆಹ್ವಾನ ನೀಡಲಾಗಿತ್ತು. ಅವರಿಗೆ ರೈತರ ಬಗ್ಗೆ ಕಾಳಜಿಯಿದ್ದಿದ್ದರೆ ಆ ಸಭೆಗೆ ಬಂದು ವಿಚಾರ ಮಂಡನೆ ಮಾಡಬಹುದಿತ್ತು. ವಕ್ಫ್ ಅದಾಲತ್ ಆದ ಬಳಿಕ ನಾಲ್ಕು ದಿನಗಳ ನಂತರ ಪ್ರತಿಭಟನೆ ಮಾಡಿದ್ದಾರೆ. ಯತ್ನಾಳ್ ಹಾಗೂ ತೇಜಸ್ವಿ ಸೂರ್ಯ ವಕ್ಫ್ ಆಸ್ತಿಗಳ ಬದಲಾಗಿ, ಒತ್ತುವರಿಯಾಗಿರುವ 740 ಎಕರೆ ಮುಜುರಾಯಿ ಆಸ್ತಿಯನ್ನು ರಕ್ಷಿಸಲು ಹೋರಾಟ ಮಾಡಲಿ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News