ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಶ್ರೀರಾಮುಲು ಬಂದರೆ ಸ್ವಾಗತ: ಸಚಿವ ಕೆ.ಎನ್. ರಾಜಣ್ಣ
![ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಶ್ರೀರಾಮುಲು ಬಂದರೆ ಸ್ವಾಗತ: ಸಚಿವ ಕೆ.ಎನ್. ರಾಜಣ್ಣ Photo of KN Rajanna](https://www.varthabharati.in/h-upload/2025/01/28/1500x900_1318646-knrajanna.webp)
ಸಚಿವ ಕೆ.ಎನ್.ರಾಜಣ್ಣ
ಬೆಂಗಳೂರು: ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆಗೆ ನಾವು ಒತ್ತಡ ಹಾಕುವುದಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಎಂದಿಗೂ ನಿಂತ ನೀರಲ್ಲ. ಹಾಗೆಯೇ ಮೇಲಿನಿಂದ ಹರಿಯುವ ನೀರನ್ನು ಕೆಳಗೆ ನಿಂತು ನೋಡಲು ಆಗುವುದಿಲ್ಲ. ಶ್ರೀರಾಮುಲು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಮಾಡುತ್ತೇವೆ ಎಂದರು.
ಇದೇ ವೇಳೆ ಶಾಸಕರಿಗೆ ಅನುದಾನ ಬಿಡುಗಡೆ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎನ್.ರಾಜಣ್ಣ, ಶಾಸಕರು ಅನುದಾನ ಕೇಳುವುದು ನ್ಯಾಯ ಸಮ್ಮತವಾಗಿಯೇ ಇದೆ. ಶಾಸಕರು ಅವರ ಮನೆಗೆ ಏನೂ ಅನುದಾನ ಕೇಳುತ್ತಿಲ್ಲ. ಹಂತ-ಹಂತವಾಗಿ ಅವರಿಗೆ ಅನುದಾನ ಬಿಡುಗಡೆ ಮಾಡುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತದೆ ಎಂದರು.
ಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್‍ಗೆ ಈಡಿ ನೋಟಿಸ್ ರಾಜಕೀಯ ಪ್ರೇರಿತವಾಗಿದೆ. ನೋಟಿಸ್ ಕೊಟ್ಟಿರುವ ಸತ್ಯಾಸತ್ಯತೆ ವಿಚಾರ ಕೋರ್ಟ್ ಮುಂದೆ ಬಂದಿದೆ. ಕೋರ್ಟ್‍ನಲ್ಲಿರುವ ವಿಚಾರದ ಬಗ್ಗೆ ನಾನು ಈಗಲೇ ಏನೂ ಮಾತಾಡುವುದಿಲ್ಲ ಎಂದು ಕೆ.ಎನ್.ರಾಜಣ್ಣ ಹೇಳಿದರು.
ಮುಡಾ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಕೊಟ್ಟರೆ ಕಷ್ಟ ಆಗುತ್ತದೆ ಎಂಬ ವಿಚಾರ ನೋಡಿದರೆ ಕಾನೂನು ಎಲ್ಲರಿಗೂ ಒಂದೇ. ಅವರಿಗೆ ಒಂದು, ಇವರಿಗೊಂದು ಅಂತ ಎರಡು ಕಾನೂನು ಇರುವುದಿಲ್ಲ. ಸಿಬಿಐ ಕೇಂದ್ರದ ಹೋಮ್ ಮಿನಿಸ್ಟರ್ ಅಧೀನದಲ್ಲಿ ಇರುತ್ತದೆ. ಒಂದೊಂದು ತನಿಖಾ ಸಂಸ್ಥೆ ಒಬ್ಬೊಬ್ಬರ ಅಧೀನದಲ್ಲಿರುತ್ತದೆ. ಆ ಸಂಸ್ಥೆಗಳು ಸ್ವಾಯತ್ತ ತನಿಖೆ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ಎಸ್‍ಸಿ/ಎಸ್‍ಟಿ ಸಮುದಾಯದ ಹಣವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬ ಆರ್.ಅಶೋಕ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎನ್.ರಾಜಣ್ಣ, ಬಿಜೆಪಿಯವರ ಕಾಲದಲ್ಲಿ ಎಷ್ಟು ಉಪಯೋಗಿಸಿಕೊಂಡಿದ್ದಾರೆ. ವಿಪಕ್ಷ ಸ್ಥಾನದಲ್ಲಿರುವ ಆರ್.ಅಶೋಕ್ ಆರೋಪ ಮಾಡುತ್ತಿದ್ದಾರೆ, ಇದು ಅವರ ಚಾಳಿಯಾಗಿದೆ. ಎಸ್‍ಸಿ, ಎಸ್‍ಟಿಗೆ ಏನು ಅನುದಾನ ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಉಳಿದಿದ್ದು ಮಾರ್ಚ್ 31ರ ಒಳಗಾಗಿ ಕೊಡುತ್ತೇವೆ ಎಂದರು.