ಪಹಲ್ಗಾಮ್‍ನಲ್ಲಿ ಭದ್ರತಾ ವೈಫಲ್ಯಕ್ಕೆ ಕಾರಣವೇನು?: ಡಾ.ಜಿ.ಪರಮೇಶ್ವರ್ ಪ್ರಶ್ನೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್ (PTI)
ಬೆಂಗಳೂರು: ಪಹಲ್ಗಾಮ್‍ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿ ಸಂಬಂಧ ಗುಪ್ತಚರ ಇಲಾಖೆ ಹಾಗೂ ಭದ್ರತಾ ವೈಫಲ್ಯಕ್ಕೆ ಹೇಗಾಯಿತು ಎನ್ನುವುದೇ ಬಹುದೊಡ್ಡ ಪ್ರಶ್ನೆಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಹಳ ಶಕ್ತಿಯುತ, ಪರಿಣಾಮಕಾರಿಯಾದ ಸೇನಾ ಗುಪ್ತಚರ ಇದ್ದರೂ ಸಹ ಜಮ್ಮು ಕಾಶ್ಮೀರದ ಪಹಲ್ಗಾಮ್‍ನಲ್ಲಿ ಭಯೋತ್ಪಾದಕರ ದಾಳಿ ಹೇಗಾಯಿತು ಎಂಬುದು ಅತಿದೊಡ್ಡ ಪ್ರಶ್ನೆಯಾಗಿದೆ. ಅನೇಕ ಸಂದರ್ಭಗಳಲ್ಲಿ ಸೇನಾ ಗುಪ್ತಚರ ಒಳ್ಳೆಯ ಕೆಲಸವನ್ನು ಮಾಡಿದೆ. ಆದರೆ, ಈಗ ಯಾಕೆ ವಿಫಲವಾಗಿದೆ ಹಾಗೂ ಉಗ್ರರು ಎಲ್ಲಿಂದ, ಹೇಗೆ ಬಂದರು ಎಂಬುದು ಅತಿದೊಡ್ಡ ಪ್ರಶ್ನೆಯಾಗಿದೆ ಎಂದರು.
ಈ ದಾಳಿಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಪುಲ್ವಾಮಾ ದಾಳಿ ನಂತರ ಇಲ್ಲಿಯವರೆಗೆ ಇಂತಹ ದುರ್ಘಟನೆಗಳು ನಡೆದಿರಲಿಲ್ಲ. ಈ ಬಾರಿ ಸೂಕ್ತವಾದ ಕ್ರಮವನ್ನು ಮುಲಾಜಿಲ್ಲದೆ ತೆಗೆದುಕೊಳ್ಳಬೇಕು ಎಂದ ಅವರು, ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸುತ್ತೇನೆ. ಪ್ರಾಣ ಕಳೆದುಕೊಂಡಿರುವ 27ಕ್ಕೂ ಹೆಚ್ಚು ಜನರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ತಿಳಿಸಿದರು.
ಕಾಂಗ್ರೆಸ್‍ನವರು ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದಿರುವ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಹೆಸರು ಬಳಸಿ ನಾವು ಮಾತನಾಡೇ ಇಲ್ಲ. ಕಾಂಗ್ರೆಸ್, ಬಿಜೆಪಿ ಮತ್ತೊಂದು ಪಕ್ಷದ ಪ್ರಶ್ನೆ ಅಲ್ಲ ಇದು. ಇದು ದೇಶದ ಭದ್ರತೆ ಮತ್ತು ನಮ್ಮ ಸಮುದಾಯಗಳ ಪ್ರಶ್ನೆ. ಅದಕ್ಯಾಕೆ ನಾವು ರಾಜಕಾರಣ ಮಾಡಬೇಕು. ಈ ವಿಚಾರದಲ್ಲಿ ಯಾಕೆ ನಾವು ರಾಜಕಾರಣ ಮಾಡಬೇಕು. ಯಾವುದೇ ಪಕ್ಷಗಳ ಹೆಸರೇ ಹೇಳಬಾರದು. ನಾನು ಕೇಂದ್ರ ಸರಕಾರವೆಂದು ಹೇಳಿದ್ದೇನೆ ಹೊರತು, ಬಿಜೆಪಿ ಎಂದು ಹೇಳಿದ್ದೇನೆಯೇ ಎಂದು ಪ್ರಶ್ನಿಸಿದರು.