ದೇಶದ ಭದ್ರತೆಗೆ ಕೇಂದ್ರ ಏನೇ ತೀರ್ಮಾನ ತೆಗೆದುಕೊಂಡರೂ ನಮ್ಮ ಸಹಕಾರ ಇದೆ : ಜಿ.ಪರಮೇಶ್ವರ್‌

Update: 2025-04-29 12:38 IST
Photo of G. Parameshwar

ಜಿ.ಪರಮೇಶ್ವರ್‌ 

  • whatsapp icon

ಬೆಂಗಳೂರು : ದೇಶದ ಭದ್ರತೆಗೆ ಕೇಂದ್ರ ಸರಕಾರ ಏನೇ ತೀರ್ಮಾನ ತೆಗೆದುಕೊಂಡರೂ ನಮ್ಮ ಸಹಕಾರ ಇದೆ. ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಇರಲಿದೆ ಎಂಬುದನ್ನು ಎಐಸಿಸಿ ಅಧಿಕೃತವಾಗಿ ಹೇಳಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಯುದ್ಧ ಬೇಡ ಹೇಳಿಕೆಗೆ ಸಿಎಂ ಕ್ಷಮೆಯಾಚಿಸಬೇಕು ಎಂಬ ಬಿಜೆಪಿ ಒತ್ತಾಯದ ಕುರಿತು ಪ್ರತಿಕ್ರಿಯಿಸಿ ಅವರು, ಯಾವ ಉದ್ದೇಶಕ್ಕಾಗಿ ಆ ರೀತಿ ಹೇಳಿದ್ದೇನೆ ಎಂಬುದರ ಕುರಿತು ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಿದ್ದಾರೆ. ಅಗತ್ಯ ಬಿದ್ದಾಗ ಯುದ್ಧ ಮಾಡಲು ಹಿಂದೆ ನೋಡಬಾರದು ಎಂಬುದನ್ನು ಹೇಳಿದ್ದಾರೆ ಎಂದರು.

ಪಹಲ್ಗಾಮ್ ಘಟನೆ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಮೃದು ಧೋರಣೆ ತೋರುತ್ತಿದ್ದಾರೆ ಎಂಬುದರ ಕುರಿತ ಮಾಧ್ಯದಮವರ ಪ್ರಶ್ನೆಗೆ, ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮಾಡಿರುವಂತ ತ್ಯಾಗವನ್ನು ಇನ್ನ್ಯಾರು ಕೂಡ ಮಾಡಲು ಸಾಧ್ಯವಿಲ್ಲ. ಅಷ್ಟು ತ್ಯಾಗ, ಬಲಿದಾನ ದೇಶದ ಭದ್ರತೆಗೆ ಕಾಂಗ್ರೆಸ್ ಪಕ್ಷ ಮಾಡಿದೆ. ಈ ವಿಚಾರದಲ್ಲಿ ನಾವು ಯಾರ ಹತ್ತಿರನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ.‌ ಮೃದುದೋರಣೆ ತೋರಿಸ್ತಾರೆ ಎಂದರೆ, ದೇಶದಲ್ಲಿ ಅಭದ್ರತೆ ಇರಲಿ ಎಂದು ಬಿಟ್ಟುಬಿಡುತ್ತೇವೆಯೇ? ಎಂದರು.

ದೇಶದ ಭದ್ರತೆ ಕಾಪಾಡುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ. ಹೆಚ್ಚಿನಾಂಶ ಯಾರು ಅಧಿಕಾರದಲ್ಲಿರುತ್ತಾರೆ, ಅವರು ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರಿಗೆ ಅವಕಾಶವಿರುತ್ತದೆ. ನಮಗೆಲ್ಲರಿಗೂ ಕೂಡ ಜವಾಬ್ಧಾರಿ ಇರಬೇಕಾಗುತ್ತದೆ. ದೆಹಲಿಯಲ್ಲಿ ನಡೆದ ಸರ್ವ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಎಐಸಿಸಿ ಅಧ್ಯಕ್ಷರು, ನಮ್ಮ ಪಕ್ಷದ ಪ್ರತಿನಿಧಿಗಳು ಕೂಡ ಘಟನೆಯನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಪಹಲ್ಗಾಮ್ ಘಟನೆಯ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವುದು ಸರಿಯಲ್ಲ. ನಾನೊಂದು ಹೇಳುವುದು, ಇನ್ನೊಬ್ಬರೊಂದು ಹೇಳುವುದು, ಬಾಯಿಗೆ ಬಂದಂತೆ ಹೇಳುತ್ತ ಹೋದರೆ ಮಹತ್ವ ಹೋಗುತ್ತದೆ. ನಾವು ಯಾರು ಕೂಡ ಹೆಚ್ಚು ಪ್ರತಿಕ್ರಿಯೆ ಮಾಡುವುದು ಸೂಕ್ತವಲ್ಲ ಎಂದರು.

ಈ ಬಗ್ಗೆ ಹೈಕಮಾಂಡ್ ಎಚ್ಚರಿಕೆ ನೀಡಿರುವ ವಿಚಾರ ಗೊತ್ತಿಲ್ಲ. ಇದು ದೇಶದ ಭದ್ರತೆ ವಿಚಾರ. ಪಕ್ಷಾತೀತವಾಗಿ ಈ ಘಟನೆಯನ್ನು ನೋಡಬೇಕು. ಪಕ್ಷಾತೀತವಾಗಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹಿಂದೆಯೇ ಹೇಳಿದ್ದೇನೆ. ದೇಶದ ಭದ್ರತೆಗೆ ಕೇಂದ್ರ ಸರಕಾರ ಏನೇ ತೀರ್ಮಾನ ತೆಗೆದುಕೊಂಡರು ನಮ್ಮ ಸಹಕಾರ ಇದೆ. ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಇರಲಿದೆ ಎಂಬುದನ್ನು ಎಐಸಿಸಿ ಅಧಿಕೃತವಾಗಿ ಹೇಳಿದೆ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಕಾರ್ಯಕ್ರಮದಲ್ಲಿ ಎಸ್ಪಿಗೆ ಸಿಎಂ ತರಾಟೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, - ಬೆಳಗಾವಿಯಲ್ಲಿ ನಿನ್ನೆ ನಡೆದ ಘಟನೆ ಬಗ್ಗೆ ಪೂರ್ಣ ಮಾಹಿತಿ ತೆಗೆದುಕೊಂಡು ಪ್ರತಿಕ್ರಿಯಿಸುತ್ತೇನೆ. ನನಗೆ ಸಂಪೂರ್ಣವಾದಂತ ಮಾಹಿತಿ ಇಲ್ಲ. ನಡೆದಿರುವ ಘಟನೆ ಏನು? ಯಾತಕ್ಕೆ ಕೋಪಗೊಂಡರು ಎಂಬುದು ಸರಿಯಾದ ಮಾಹಿತಿ ತೆಗೆದುಕೊಂಡಿಲ್ಲ. ಪೂರ್ಣ ಮಾಹಿತಿ ತೆಗೆದುಕೊಂಡ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾದ ಐದಾರು ಜನ ಕಾಂಗ್ರೆಸ್ ಶಾಲುಗಳನ್ನು ಹಾಕಿಕೊಂಡು ಕಾರ್ಯಕ್ರಮಕ್ಕೆ ಒಳಗೆ ಹೋಗಿದ್ದರು. ನಂತರ ಅವರು ಎಲ್ಲರು ಮಾತಾಡುವಾಗ ಏನು ಮಾಡಿಲ್ಲ. ಮುಖ್ಯಮಂತ್ರಿಯವರು ಮಾತಾಡುವಾಗ ಕಪ್ಪು ಭಾವುಟ ಪ್ರದರ್ಶಿಸಿದ್ದಾರೆ. ಈ ವೇಳೆ ಲೋಪ ಇಲಾಖೆಯಿಂದ ಆಗಿದೆಯಾ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿಯವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಘಟನೆ ಭದ್ರತಾ ವೈಫಲ್ಯ ಎನ್ನುವುದಾದರೆ ಬಿಜೆಪಿಯವರು ಕಾಂಗ್ರೆಸ್ ಶಾಲು ಯಾಕೆ ಹಾಕಿಕೊಂಡು ಬಂದರು. ಬಿಜೆಪಿ ಶಾಲು ಹಾಕಿಕೊಂಡು ಬರಬಹುದಿತ್ತಲ್ಲವೇ? ಬಿಜೆಪಿ ಶಾಲು ಹಾಕಿಕೊಂಡು ಬಂದಿದ್ದರೆ ಭದ್ರತಾ ವೈಫಲ್ಯವೇ ಅಥವಾ ಏನು ಎಂಬುದು ಗೊತ್ತಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಶಾಲು ಹಾಕಿಕೊಂಡು ಬರುವುದಕ್ಕೆ ಇವರಿಗೆ ಏನು ನೈತಿಕತೆ ಇತ್ತೋ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News