ವಿಜಯೇಂದ್ರ ವಿರುದ್ಧ 150 ಕೋಟಿ ರೂ. ಆಮಿಷ ಆರೋಪ | ಅನ್ವರ್ ಮಾಣಿಪ್ಪಾಡಿಗೆ ಬಿಜೆಪಿ ನೋಟಿಸ್ ನೀಡದಿರಲು ಕಾರಣವೇನು? : ಪ್ರಿಯಾಂಕ್ ಖರ್ಗೆ
ಬೆಳಗಾವಿ : ವಕ್ಫ್ ಆಸ್ತಿ ಕಬಳಿಕೆ ಕುರಿತಂತೆ ಮೌನ ವಹಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮಗೆ ಹಲವು ಬಾರಿ ತಮಗೆ ಆಮಿಷವೊಡ್ಡಿದ್ದರು ಎಂದು ಆರೋಪ ಮಾಡಿರುವ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಬಿಜೆಪಿ ಪಕ್ಷದಿಂದ ಈವರೆಗೆ ನೋಟಿಸ್ ನೀಡದಿರಲು ಕಾರಣವೇನು? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಸೋಮವಾರ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಜಯೇಂದ್ರ ವಿರುದ್ಧ ಅನ್ವರ್ ಮಾಣಿಪ್ಪಾಡಿ ಆರೋಪ ಮಾಡಿರುವ ವರದಿಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಅವುಗಳನ್ನು ಉಲ್ಲೇಖಿಸಿ ನಾವು ಮಾತನಾಡಿದ್ದೇವೆ ಎಂದು ಹೇಳಿದರು.
ವಿಜಯೇಂದ್ರ ವಿಚಾರದಲ್ಲಿ ನಾವಾಗಲಿ, ನಮ್ಮ ಸರಕಾರವಾಗಲಿ ಹಿಟ್ ಅಂಡ್ ರನ್ ಮಾಡುತ್ತಿಲ್ಲ. ಅದೇನಿದ್ದರೂ, ಬಿಜೆಪಿ ಕೆಲಸ. ವಿಜಯೇಂದ್ರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಅನ್ವರ್ ಮಾಣಿಪ್ಪಾಡಿ ಪತ್ರ ಬರೆದಿದ್ದಾರೆ. ಕೇಂದ್ರ ಸರಕಾರವೇ ಯಾಕೆ ಈ ಪ್ರಕರಣವನ್ನು ಸಿಬಿಐ ಕೊಟ್ಟಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ, ಬಿಜೆಪಿಯ ರಾಜ್ಯಾಧ್ಯಕ್ಷ ಆಗಿರುವ ವಿಜಯೇಂದ್ರ ವಿರುದ್ಧ ಸುಳ್ಳು ಆರೋಪ ಮಾಡಿದ್ದರೆ, ಅನ್ವರ್ ಮಾಣಿಪ್ಪಾಡಿಗೆ ಈವರೆಗೆ ಪಕ್ಷದಿಂದ ಒಂದೇ ಒಂದು ನೋಟಿಸ್ ಕೂಡ ನೀಡಿಲ್ಲ ಯಾಕೆ? ಅವರ ಆರೋಪ ಸುಳ್ಳಾಗಿದ್ದರೆ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಅವರು ಆಗ್ರಹಿಸಿದರು.
ನಿಮ್ಮ ಬೂಟಾಟಿಕೆ ಎಲ್ಲರಿಗೂ ಗೊತ್ತಾಗಿದೆ. ವಕ್ಫ್ ಆಸ್ತಿ ಕಬಳಿಕೆಯಲ್ಲಿ ಶಾಸಕ ಎನ್.ಎ.ಹಾರಿಸ್, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರಿದೆ ಎಂದು ಹೇಳುತ್ತಿದ್ದೀರಾ. ಆದರೆ, ಯಾರಾದರೂ ಕಾಂಗ್ರೆಸ್ ನಾಯಕರು ಆಮಿಷ ಕೊಟ್ಟಿದ್ದಾರೆ ಎಂದು ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರಾ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯ ಸರಕಾರವನ್ನು ಕಿತ್ತೊಗೆಯಲು ವಿಜಯೇಂದ್ರ ನೂರಾರು ಕೋಟಿ ರೂ.ಜಮೆ ಮಾಡಿ ಇಟ್ಟುಕೊಂಡಿದ್ದಾರೆಂದು ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ, ತಮ್ಮ ವಿರುದ್ಧದ ಆರೋಪದ ಕುರಿತು ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಜನರಿಗೆ ಉತ್ತರ ಕೊಡಬೇಕು. ನೀವು ಮಾಡಿರುವುದನ್ನು ನಾವು ಜನರಿಗೆ ತಿಳಿಸುತ್ತೇವೆ. ಅನ್ವರ್ ಮಾಣಿಪ್ಪಾಡಿ ವರದಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಆದರೆ, ಅವರ ಆರೋಪದ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ನಾವು ಒತ್ತಾಯ ಮಾಡುತ್ತೇವೆ. ಈ ಸಂಬಂಧ ಗೃಹ ಸಚಿವರ ಬಳಿ ಮನವಿ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.