ದಾವಣಗೆರೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ಪ್ರಕರಣ | ಕಾನೂನಿನ ಚೌಕಟ್ಟಿನಲ್ಲಿ ಕಠಿಣ ಕ್ರಮಕ್ಕೆ ಸೂಚನೆ : ಜಿ.ಪರಮೇಶ್ವರ್‌

Update: 2025-04-16 14:57 IST
Photo of  G.Parameshwar

 ಜಿ.ಪರಮೇಶ್ವರ್‌

  • whatsapp icon

ಬೆಂಗಳೂರು: ದಾವಣಗೆರೆಯಲ್ಲಿ ನಡುರಸ್ತೆಯಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣವನ್ನು ಸ್ಥಳೀಯ ಪೊಲೀಸರು ಗಮನಿಸುತ್ತಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಇಂತಹ ಘಟನೆಗಳಾದಾಗ ಯಾವುದೇ ರೀತಿಯ ಮುಲಾಜಿಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ಕಠಿಣವಾದ ಕ್ರಮ ತೆಗೆದುಕೊಳ್ಳುವಂತೆ ಈಗಾಗಲೇ ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಹೇಳಿದರು.

ಸದಾಶಿವನಗರದಲ್ಲಿರುವ ಸಚಿವರ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಮೇಲೆ ಹಲ್ಲೆ ಪ್ರಕರಣಗಳಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲವು ವಿಶೇಷ ಸೂಚನೆಗಳನ್ನು ನೀಡಿದ್ದೇನೆ. ಅದರ ಪ್ರಕಾರ ಮಾಡಿಕೊಂಡು ಬರುತ್ತಿದ್ದಾರೆ. ಯಾವುದೇ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಎಲ್ಲ ಪ್ರಕರಣಗಳಲ್ಲಿಯೂ ಆರೋಪಿಗಳನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ. ಒಬ್ಬೊಬ್ಬರ ಟೀಕೆಗೆ ಉತ್ತರಿಸಲು ಆಗುವುದಿಲ್ಲ. ಕೋಪ ಬಂದಾಗ, ನೋವಾದಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅದಕ್ಕೆಲ್ಲ ಉತ್ತರಿಸಲು ಆಗುತ್ತದೆಯೇ? ದೇಶದಲ್ಲಿ ಕಾನೂನು ಇದೆ.‌ ಅದರ‌ ಪ್ರಕಾರ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಸಭೆ ನಡೆದಿರುವುದಷ್ಟೆ ಗೊತ್ತು :

ಒಕ್ಕಲಿಗ ಸಮುದಾಯದ ಸಭೆ ನಡೆದಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಯಿಸಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯ ಸಭೆ ನಡೆದಿರುವುದಷ್ಟೆ ಗೊತ್ತು. ಒಳಗಡೆ ಏನೆಲ್ಲ ಚರ್ಚೆಯಾಗಿದೆ ಎಂಬುದು ನಮಗೆ ಮಾಹಿತಿ ಇಲ್ಲ. ಒಕ್ಕಲಿಗ ಸಮುದಾಯವು ತಮಗೆ ಅನ್ಯಾಯ ಆಗಬಾರದು ಎಂಬುದನ್ನು ಪ್ರಸ್ತಾಪ ಮಾಡಿದ್ದಾರೆ‌. ಇದನ್ನು ಹೊರತುಪಡಿಸಿ ಬೇರೆ ಏನು ಗೊತ್ತಿಲ್ಲ ಎಂದರು.

 ಪೊಲೀಸ್ ಇಲಾಖೆಗೆ ಉತ್ತೇಜನ ನೀಡಿದಂತಾಗಿದೆ :

ಟಾಟಾ ಟ್ರಸ್ಟ್‌ನವರು ಕೆಲವು ಮಾನದಂಡಗಳನ್ನು ಇಟ್ಟುಕೊಂಡು ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸ್ ವ್ಯವಸ್ಥೆ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಪೊಲೀಸ್ ಬಹಳ ಶ್ರಮ ವಹಿಸಿ ಕೆಲಸ ಮಾಡುತ್ತಿದೆ ಎಂಬುದನ್ನು ಮೊದಲಿನಿಂದಲೂ ಅನೇಕ ಸಂದರ್ಭಗಳಲ್ಲಿ ಹೇಳಿದ್ದೇನೆ. ಇಂದು ಸತ್ಯವಾಗಿದೆ. ಈ ವರದಿಯಿಂದ ರಾಜ್ಯ ಪೊಲೀಸ್ ಇಲಾಖೆಗೆ ಉತ್ತೇಜನ ನೀಡಿದಂತಾಗಿದೆ ಎಂದರು.

ಜಾತಿಗಣತಿ ವರದಿ ಸಚಿವ ಸಂಪುಟದ ಕೈಸೇರಿದ ಬಳಿಕ ಒಂದೇ ದಿನದಲ್ಲಿ ಚರ್ಚಿಸಲು ಆಗುವುದಿಲ್ಲ. ವರದಿಯನ್ನು ಓದಲು ಸಮಯ ಬೇಕು ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿದಾಗ, ವರದಿಯ ಪ್ರತಿ ನೀಡಿ, ಒಂದು ವಾರ ಕಾಲಾವಕಾಶ ನೀಡಿದ್ದಾರೆ. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುತ್ತೇವೆ. ಯಾರಿಗೆ ಏನೇನು ಅಭಿಪ್ರಾಯಗಳಿದೆ, ಅದನ್ನು ಸಂಪುಟದಲ್ಲಿ ಹೇಳುತ್ತಾರೆ. ಅಂತಿಮವಾಗಿ ಸರ್ಕಾರ ಏನು ತೀರ್ಮಾನ ಮಾಡುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News