ಸೌಜನ್ಯ ಕೊಲೆ ಕುರಿತ ವಿಡಿಯೋ ಪ್ರಕರಣ: ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧದ ಎಫ್ಐಆರ್ ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

Update: 2025-03-12 21:56 IST
ಸೌಜನ್ಯ ಕೊಲೆ ಕುರಿತ ವಿಡಿಯೋ ಪ್ರಕರಣ: ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧದ ಎಫ್ಐಆರ್ ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಯೂಟ್ಯೂಬರ್ ಎಂ.ಡಿ. ಸಮೀರ್

  • whatsapp icon

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಯೂಟ್ಯೂಬರ್ ಎಂ.ಡಿ. ಸಮೀರ್ ವಿರುದ್ಧ ಬಳ್ಳಾರಿಯ ಕೌಲ್‌ ಬಜಾರ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿ ಆದೇಶಿದೆ.

ಎಫ್ಐಆರ್ ರದ್ದು ಕೋರಿ ಸಮೀರ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.

ವಿಚಾರಣೆ ವೇಳೆ ಸಮೀರ್‌ ಪರ ವಕೀಲರು, ಎಫ್‌ಐಆರ್‌ ದಾಖಲಿಸಿರುವುದು ಕಾನೂನು ಬಾಹಿರವಾಗಿದೆ. ಇದು ನಾಗರಿಕರಿಗೆ ಸಾಂವಿಧಾನಿಕವಾಗಿ ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು 19(1) ಮತ್ತು 21ನೇ ವಿಧಿಗೆ ವಿರುದ್ಧವಾಗಿದೆ. ವ್ಯಕ್ತಿಯ ವಿರುದ್ಧದ ಹೇಳಿಕೆ ಧರ್ಮದ ವಿರುದ್ಧ ಹೇಳಿಕೆ ಆಗುವುದಿಲ್ಲ. ಅದರ ವ್ಯಾಪ್ತಿ ಸೀಮಿತವಾದುದು. ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಆರೋಪಗಳು ಈ ಪ್ರಕರಣದಲ್ಲಿ ಅನ್ವಯ ಆಗುವುದಿಲ್ಲ. ಹಾಗೇನಾದರೂ ಇದ್ದರೆ ನಿತ್ಯಾನಂದ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಸಾಧ್ಯವಿರುತ್ತಿರಲಿಲ್ಲವೆಂದು ವಾದ ಮಂಡಿಸಿದರು.

ಈ ವೇಳೆ ನ್ಯಾಯಪೀಠ ಬಂಧನ ತಡೆದರೆ ಸಾಕಾ ಅಥವಾ ಎಫ್‌ಐಆರ್‌ಗೆ ತಡೆ ನೀಡಬೇಕಾ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು. ಅದಕ್ಕೆ ಸಂಪೂರ್ಣ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ವಕೀಲರು ಮನವಿ ಮಾಡಿದರು.

ಮನವಿ ಪುರಸ್ಕರಿಸಿದ ನ್ಯಾಯಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News