‘ಪ್ರಜ್ವಲ’ ಪಾಳೇಗಾರಿಕೆಯ ಬೇರುಗಳು ಮತ್ತು ಉದಾರವಾದಿ ಕುರುಡುಗಳು

ಜೀವನಕಥನಗಳು ಅತ್ಮಕಥೆಗಳಲ್ಲ. ಏಕೆಂದರೆ ಆತ್ಮಕಥೆಗಳು ಲೇಖಕರು ತಮ್ಮನ್ನು ತಾವು ನೋಡಿಕೊಳ್ಳುವ ರೀತಿ. ಅವೆಲ್ಲವನ್ನು ಓದುಗರು ಒಪ್ಪಿಕೊಳ್ಳಲೇ ಬೇಕೆಂದೇನೂ ಇಲ್ಲ. ಅದನ್ನು ಒಂದು ಕಥೆಯಾಗಿ ಓದಬಹುದು. ಕಲಿಯಬಹುದು. ಆದರೆ ಇತರರು ಮತ್ತೊಬ್ಬರ ಬಗ್ಗೆ ಬರೆಯುವ ಆತ್ಮಕಥನಗಳು, ಅದರಲ್ಲೂ ಸುಗತ ಅವರಂತಹ ಹಿರಿಯ ಪತ್ರಕರ್ತರು ಅಪಾರ ಅಧ್ಯಯನದೊಂದಿಗೆ ಬರೆದಿರುವ ಇಂತಹ ಕೃತಿಗಳು ವ್ಯಕ್ತಿಯ ಬಗ್ಗೆ ಮಾತ್ರವಲ್ಲದೆ ವಿದ್ಯಮಾನಗಳ ಬಗ್ಗೆ ಒಂದು ಅಧಿಕಾರವಾಣಿಯಲ್ಲಿ ಒಂದು ಅಭಿಪ್ರಾಯವನ್ನು ಹುಟ್ಟುಹಾಕುತ್ತವೆ. ಆದರೆ ಅಂತಹ ಜೀವನಕಥನಗಳನ್ನು ವ್ಯಕ್ತಿಯ, ವಿದ್ಯಮಾನಗಳ ಎಲ್ಲಾ ಮಗ್ಗಲುಗಳನ್ನೂ ಹಿಡಿದುಕೊಡದೆ ಕಥಾನಾಯಕನ ದೃಷ್ಟಿಕೋನಕ್ಕೆ ಪೂರಕವಾಗಿ ಮಾತ್ರವೇ ವಿವರಗಳನ್ನು ಹೆಕ್ಕಿ ತೆಗೆದರೆ ಅದರ ಏಕಪಕ್ಷೀಯತೆಯೇ ಅದರ ಮಿತಿಯೂ ಆಗಿಬಿಡುತ್ತದೆ.

Update: 2024-05-23 04:38 GMT
Editor : Thouheed | Byline : ಶಿವಸುಂದರ್

ಭಾಗ- 2

‘‘ದೇವೇಗೌಡರು ವಿಧಿ ಬರೆಯುವ ಗೆರೆಗಳಲ್ಲಿ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದರೂ ಅವರ ರೈತ ಹಿನ್ನೆಲೆ ಮತ್ತು ಅವರ ದೈವಭೀರು ಪ್ರಾಮಾಣಿಕತೆಗಳು ಕೊಟ್ಟ ಅವಕಾಶಗಳಿಂದ ಭಾರತದ ರಾಜಕಾರಣದಲ್ಲಿ ದೇವೇಗೌಡರು ವಿಶಿಷ್ಟವಾದ ನೇಗಿಲಗೆರೆಗಳನ್ನು ಎಳೆದರು’’ ಎಂಬುದು ಸುಗತ ಅವರು ಈ ಕೃತಿಯಲ್ಲಿ ಹೇಳುವ ಕಥೆಯ ಸಾರ. ಎಲ್ಲಕ್ಕಿಂತ ಮುಖ್ಯವಾಗಿ ಶೂದ್ರ ಹಿನ್ನೆಲೆಯಿಂದ ಬಂದ ದೇವೇಗೌಡರಿಗೆ ಇತರ ಪ್ರಧಾನಿಗಳಿಗೆ ಹಾಗೂ ಬಹುಪಾಲು ಪ್ರಖ್ಯಾತ ನಾಯಕರಿಗೆ ಇದ್ದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಂಡವಾಳವಿರಲಿಲ್ಲ. ಹೀಗಾಗಿ ಇತರರಿಗೆ ಸುಲಭವಾಗಿ ದಕ್ಕಿದ್ದನ್ನು ಗೌಡರು ಕೇವಲ ತಮ್ಮ ಪರಿಶ್ರಮ ಹಾಗೂ ಬದ್ಧತೆಗಳಿಂದ ಪಡೆದುಕೊಂಡರು ಎಂಬುದನ್ನು ಸುಗತ ಅವರು ತಮ್ಮ ಕೃತಿಯಲ್ಲಿ ವಕೀಲರೋಪಾದಿಯಲ್ಲಿ ಪ್ರತಿಪಾದಿಸುತ್ತಾರೆ.

ಈ ಬಗೆಯ ಸಾಂಸ್ಕೃತಿಕ ಬಂಡವಾಳಗಳು ಇಲ್ಲದಿದ್ದರಿಂದಲೇ ದೇವೇಗೌಡರ ಸಾಧನೆಗೆ ಸಿಗಬೇಕಿದ್ದಷ್ಟು ಮಾನ್ಯತೆ ಮತ್ತು ಪ್ರಚಾರ ಸಿಕ್ಕಿಲ್ಲ ಎಂಬುದು ಲೇಖಕರ ಮತ್ತೊಂದು ಮುಖ್ಯ ಪ್ರತಿಪಾದನೆಯಾಗಿದೆ. ಹಾಗೆ ನೋಡಿದರೆ ಈ ಕೃತಿಯು ಆ ಕೊರತೆಯನ್ನು ಸಮರ್ಥವಾಗಿ ನೀಗಿಸುತ್ತದೆ ಮತ್ತು ಅದೇ ಈ ಕೃತಿಯ ಮುಖ್ಯ ಆಶಯವೆಂದೂ ಕೆಲವೊಮ್ಮೆ ಭಾಸವಾಗುತ್ತದೆ ಹಾಗೂ ಆದ್ದರಿಂದಲೇ ಅದು ಪರೋಕ್ಷವಾಗಿ ಕೃತಿಯ ಮಿತಿಯೂ ಆಗಿಬಿಟ್ಟಿದೆ.

ಇದಕ್ಕಾಗಿ ಲೇಖಕರು ಮುಖ್ಯಮಂತ್ರಿಯಾಗಿ ಕೃಷ್ಣ ಮತ್ತು ಕಾವೇರಿ ಯೋಜನೆಗಳಲ್ಲಿ ದೇವೇಗೌಡರ ಪಾತ್ರವನ್ನು ವಿಸ್ತೃತವಾಗಿ ಅಂಕಿಅಂಶಗಳೊಂದಿಗೆ ಸಕಾರಣವಾಗಿಯೇ ಪ್ರತಿಪದಿಸುತ್ತಾರೆ. ಆಗ ಕೃಷ್ಣ ಮೇಲ್ದಂಡೆ ಯೋಜನೆಯ ಜಾರಿಯ ಜವಾಬ್ದಾರಿ ಹೊತ್ತುಕೊಂಡಿದ್ದ ಅಧಿಕಾರಿ ಜಾಮ್ದಾರ್ ಅವರನ್ನು ವಿಸ್ತೃತವಾಗಿ ಉಲ್ಲೇಖಿಸುತ್ತಾರೆ. ಅದೇ ಕಾರಣಕ್ಕಾಗಿಯೇ ಕೃತಿಯ ಅರ್ಧ ಭಾಗ ದೇವೇಗೌಡರು ಪ್ರಧಾನಿಯಾಗಿ ರಾಜ್ಯಭಾರ ಮಾಡಿದ ಹತ್ತು ತಿಂಗಳಲ್ಲಿ ಮಾಡಿದ ಸಾಧನೆಯ ಬಗ್ಗೆ ಮೀಸಲಾಗಿದೆ.

ಕಾಶ್ಮೀರ ಹಾಗೂ ಈಶಾನ್ಯ ಭಾರತಗಳ ಜನರ ವಿಶ್ವಾಸ ಗೆಲ್ಲುವ ಕ್ರಮಗಳು, ಕೃಷಿಗೆ ಒತ್ತುಕೊಡುತ್ತಲೇ ವಿದೇಶಿ ಬಂಡವಾಳ ಆಕರ್ಷಿಸುವ ಕೈಗಾರಿಕಾ ನೀತಿಗೆ, ನಗರಾಭಿವೃದ್ಧಿಗೆ ಒತ್ತು ಕೊಡುವ ದೃಷ್ಟಿಕೋನಗಳು, ಫರಕ್ಕಾ ಯೋಜನೆಯ ಮೂಲಕ ಬಾಂಗ್ಲಾ ದೇಶದೊಂದಿಗೆ ಅಂತರ್‌ರಾಷ್ಟ್ರೀಯ ನದಿ ನೀರು ಹಂಚಿಕೆ, ನರ್ಮದಾ ಮತ್ತು ತೆಹ್ರಿ ಅಣೆಕಟ್ಟು ವಿವಾದದ ನಿಭಾವಣೆ ಇತ್ಯಾದಿಗಳನ್ನು ಲೇಖಕರು ಒಂದೊಂದಾಗಿ ವಿವರಿಸುತ್ತಾ ಒಂದು ರೀತಿಯ ದೇವೇಗೌಡ ಇಸಂ ಬಗ್ಗೆ ಮೋಹಕ್ಕೆ ಬಿದ್ದವರಂತೆ ಬಣ್ಣಿಸುತ್ತಾರೆ.

ಹಾಗೆಯೇ, ಸ್ವಾತಂತ್ರ್ಯೋತ್ತರ ಭಾರತದ ಪ್ರಜಾತಂತ್ರದಲ್ಲಿ ಬೇರುಬಿಟ್ಟಿರುವ ಸ್ಥಾಪಿತ ಹಿತಾಸಕ್ತಿಗಳು ಹೇಗೆ ದೇವೇಗೌಡರಂತಹವರನ್ನು ಮೆಟ್ಟಿಲುಗಳಂತೆ ಬಳಸಿಕೊಂಡು ವಂಚಿಸುತ್ತವೆ ಎಂಬುದನ್ನು ಕೂಡ ಸುಗತ ಮನಕರಗುವಂತೆ ಚಿತ್ರಿಸುತ್ತಾರೆ.

ಹಾಗೆ ನೋಡಿದರೆ ಸಾಧಕ ದೇವೇಗೌಡರ ಜೊತೆಗೆ ವಂಚಿತ ಹಾಗೂ ಬಲಿಪಶುವಾಗುವ ದೇವೇಗೌಡರ ಚಿತ್ರಣ ಜೊತೆಜೊತೆಗೆ ಸಾಗುತ್ತಾ ಓದುಗರಲ್ಲಿ ಕಥಾನಾಯಕನ ಬಗ್ಗೆ ಅಪಾರ ಸಹಾನುಭೂತಿಯನ್ನು ಹುಟ್ಟಿಸುತ್ತದೆ.

ಇಡೀ ಕೃತಿಯ ಅತಿ ದೊಡ್ಡ ಅಧ್ಯಾಯ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ಸಂಬಂಧದ ಕುರಿತಾಗಿರುವುದು ಮಾತ್ರವಲ್ಲದೆ ಹೇಗೆ ದೇವೇಗೌಡರು ತಮ್ಮ ಜಾತಿ ಬಲ ಹಾಗೂ ಸಂಖ್ಯಾಬಲವನ್ನು ಹೆಗಡೆಯವರ ರಾಜಕೀಯ ಏಳಿಗೆಗೆ ವಿನಿಯೋಗಿಸಿದರೂ ಹೆಗಡೆಯವರು ಮಾತ್ರ ತಮ್ಮ ಚಾಣಾಕ್ಷತನದಿಂದ ದೇವೇಗೌಡರ ರಾಜಕೀಯ ಏಳಿಗೆಗೆ ಕಾಲಕಾಲಕ್ಕೆ ಅಡ್ಡಗಾಲು ಹಾಕುತ್ತಾ ಬಂದರು ಎಂಬುದನ್ನು ಸಣ್ಣಪುಟ್ಟ ವಿವರಗಳನ್ನು ಕೂಡ ಒಳಗೊಂಡು ಸಚಿತ್ರವಾಗಿ ಕಟ್ಟಿಕೊಡುತ್ತದೆ. ಹಾಗೆಯೇ ದೇವೇಗೌಡರು ಪ್ರಧಾನಿಯಾದಾಗ ಯಾವುದೇ ಕಾರಣವಿಲ್ಲದೆ ಹೇಗೆ ಕಾಂಗ್ರೆಸ್ ಪಕ್ಷ ತನ್ನ ಒಳಬಣ ರಾಜಕಾರಣದ ಭಾಗವಾಗಿ ನಯವಂಚನೆ ಮಾಡಿ ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಅನ್ಯಾಯಯುತವಾಗಿ ಕೆಳಗಿಳಿಸಿತು ಎಂಬುದನ್ನೂ ಸಹ ವಿವರಿಸುತ್ತಾರೆ.

ಪುಸ್ತಕದ ಕಥನವು ತಾಂತ್ರಿಕವಾಗಿ 1999ಕ್ಕೆ ಬಂದು ನಿಂತರೂ ಒಟ್ಟಾರೆ ದೇವೇಗೌಡರ ಬದುಕು ಮತ್ತು ಹೋರಾಟ ಹಾಗೂ ವಿದ್ಯಮಾನಗಳ ಮಹತ್ವವನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ಕೊನೆಯ ಅಧ್ಯಾಯಗಳು 1933 ರಿಂದ 2021ರ ವರೆಗೂ ಚಾಚಿಕೊಳ್ಳುತ್ತವೆ. ಅದರ ಭಾಗವಾಗಿಯೇ ದೇವೇಗೌಡರು ಹೇಗೆ ದೈವನಿಷ್ಠ ಸೆಕ್ಯುಲರ್ ವ್ಯಕ್ತಿಯಾಗಿದ್ದರು ಎಂಬುದನ್ನು ವಿವರಿಸುತ್ತಾ ಗುಜರಾತ್ ಹತ್ಯಾಕಾಂಡವಾದಾಗ ದೇವೇಗೌಡರು ಪ್ರಧಾನಿ ವಾಜಪೇಯಿಯವರಿಗೆ ಬರೆದ ಪತ್ರಗಳ ಹಾಗೂ ಸದನದಲ್ಲಿ ವಾಜಪೇಯಿಯವರ ಸೆಕ್ಯುಲರ್ ಮುಖವಾಡವನ್ನು ಕಿತ್ತುಹಾಕಿದ ಭಾಷಣಗಳ ಪಠ್ಯವನ್ನು ಲೇಖಕರು ಒದಗಿಸುತ್ತಾರೆ.

ಹಾಗೆಯೇ 2006ರಲ್ಲಿ ದೇವೇಗೌಡರ ಮಗ ಎಚ್.ಡಿ. ಕುಮಾರಸ್ವಾಮಿಯವರು ತಂದೆಯ ನಿಲುವಿಗೆ ವಿರುದ್ಧವಾಗಿ ಬಿಜೆಪಿಯೊಂದಿಗೆ ಕೈಗೂಡಿಸಿದಾಗ ದೇವೇಗೌಡರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಸಿದುಹೋಗಿದ್ದರು ಎಂಬ ಹೃದಯವಿದ್ರಾವಕ ಚಿತ್ರಣವನ್ನು ಕೃತಿ ನೀಡುತ್ತದೆ. ಅದೇ ಸಮಯದಲ್ಲಿ ಕಾಶ್ಮೀರ, ಈಶಾನ್ಯ ಭಾರತ, ನೀರಾವರಿ ಯೋಜನೆಗಳ ವಿಷಯದಲ್ಲಿ ದೇವೇಗೌಡರು ತೆಗೆದುಕೊಂಡ ಮುಂದೊಡಗನ್ನೇ ಇತರ ಪ್ರಧಾನಿಗಳು ಮುಂದುವರಿಸಿದ್ದರೂ ದೇವೇಗೌಡರ ಹೆಸರನ್ನು ಪ್ರಸ್ತಾಪಿಸದೆ ಹೇಗೆ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬುದನ್ನು ಲೇಖಕರು ಎತ್ತಿ ತೋರಿಸುತ್ತಾರೆ.

ಈ ಎಲ್ಲಾ ಕಾರಣಗಳಿಂದಾಗಿ ಹೇಗೆ ದೇವೇಗೌಡರು ಈಗಲೂ ವಂಚಿತ ನಾಯಕರಾಗಿದ್ದಾರೆ ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಸುತ್ತಾ ಕೃತಿಯನ್ನು ಮುಗಿಸುತ್ತಾರೆ.

ಸುಗತ ಅವರ ಈ ಕೃತಿಯು ದೇವೇಗೌಡರ ಬಗ್ಗೆ, ಅವರ ಸಾಧನೆಗಳ ಬಗ್ಗೆ ಪ್ರಧಾನ ಧಾರೆ ಮಾಧ್ಯಮಗಳು ಹೇಳದಿದ್ದ ಅಥವಾ ಅವಗಣನೆ ಮಾಡಿದ್ದ ಹಲವಾರು ವಿಷಯಗಳನ್ನು ಮನವರಿಕೆಯಾಗುವ ರೀತಿಯಲ್ಲಿ ಪರಿಚಯಿಸುತ್ತದೆ. ದೇವೇಗೌಡರ ಬಗ್ಗೆ ಅಭಿಮಾನ ಮೂಡಿಸುವುದರ ಜೊತೆಗೆ ಇಂತಹ ಸಾಧ್ಯತೆಗಳನ್ನು ಹತ್ತಿಕ್ಕುವ ಭಾರತೀಯ ಸಮಾಜದ ಸ್ಥಾಪಿತ ಹಿತಾಸಕ್ತಿಗಳ ಬಗ್ಗೆ ಜಿಗುಪ್ಸೆ ಮೂಡಿಸುತ್ತದೆ.

ಲೇಖಕರ ಪ್ರಕಾರ ದೇವೇಗೌಡ ಎಂಬ ದೊಡ್ಡ ಜೀವ ಭಾರತದ ಪ್ರಜಾತಂತ್ರದಲ್ಲಿ ಒಂದು ವಿದ್ಯಮಾನವಾಗಿ ಬೆಳೆದು ನಿಲ್ಲಲು ಕಾರಣ ಅವರ ಕಾರ್ಯಶ್ರದ್ಧೆ, ಕಾಯುವಿಕೆ, ರಾಜಕೀಯ ಚಾಣಾಕ್ಷತೆ ಮತ್ತು ವಿಧಿ ಬರಹದಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಇರುವ ಆಳವಾದ ನಂಬಿಕೆಗಳು. ಅದೇ ರೀತಿ ಅವರು ಎಡ ಅಥವಾ ಬಲ ಎಂಬ ಯಾವುದೇ ಸಿದ್ಧಾಂತಗಳಿಗೆ ಆತುಕೊಳ್ಳದೆ ತಮ್ಮ ಗ್ರಾಮಜನ್ಯ ಹಾಗೂ ರೈತ ಸಂವೇದನೆಯ ಸಾಮಾನ್ಯ ಜ್ಞಾನ ಹಾಗೂ ಒಳಿತು ಕೆಡುಕುಗಳ ಪ್ರಜ್ಞೆಯೇ ಅವರಿಂದ ದೊಡ್ದ ಸಾಧನೆಗಳನ್ನು ಮಾಡಿಸಿತು ಎಂಬ ಬೀಸು ತೀರ್ಮಾನವನ್ನು ಕೂಡಾ ಲೇಖಕರು ನೀಡುತ್ತಾರೆ.

ಉದಾರವಾದಿ ವಕಾಲತ್ತು ಮರೆಸುವ ಉಳಿಗಮಾನ್ಯತೆಯ ಮುಖ

ಆದರೆ ಲೇಖಕರ ದೃಷ್ಟಿಕೋನ ಮತ್ತು ಅಧ್ಯಯನಕ್ಕೆ ಮತ್ತು ನಿರೂಪಣೆಗೆ ಅನುಸರಿಸಿರುವ ರೀತಿಯಿಂದಾಗಿ ಕೃತಿಯಲ್ಲಿ ಹಲವಾರು ಮಿತಿಗಳಿರುವುದನ್ನು ಕೂಡ ಗಮನದಲ್ಲಿಟ್ಟುಕೊಳ್ಳುವುದು ಅಷ್ಟೇ ಮುಖ್ಯ ಎಂದು ನನಗನಿಸುತ್ತದೆ.

ಜೀವನಕಥನಗಳು ಅತ್ಮಕಥೆಗಳಲ್ಲ. ಏಕೆಂದರೆ ಆತ್ಮಕಥೆಗಳು ಲೇಖಕರು ತಮ್ಮನ್ನು ತಾವು ನೋಡಿಕೊಳ್ಳುವ ರೀತಿ. ಅವೆಲ್ಲವನ್ನು ಓದುಗರು ಒಪ್ಪಿಕೊಳ್ಳಲೇ ಬೇಕೆಂದೇನೂ ಇಲ್ಲ. ಅದನ್ನು ಒಂದು ಕಥೆಯಾಗಿ ಓದಬಹುದು. ಕಲಿಯಬಹುದು.

ಆದರೆ ಇತರರು ಮತ್ತೊಬ್ಬರ ಬಗ್ಗೆ ಬರೆಯುವ ಆತ್ಮಕಥನಗಳು, ಅದರಲ್ಲೂ ಸುಗತ ಅವರಂತಹ ಹಿರಿಯ ಪತ್ರಕರ್ತರು ಅಪಾರ ಅಧ್ಯಯನದೊಂದಿಗೆ ಬರೆದಿರುವ ಇಂತಹ ಕೃತಿಗಳು ವ್ಯಕ್ತಿಯ ಬಗ್ಗೆ ಮಾತ್ರವಲ್ಲದೆ ವಿದ್ಯಮಾನಗಳ ಬಗ್ಗೆ ಒಂದು ಅಧಿಕಾರವಾಣಿಯಲ್ಲಿ ಒಂದು ಅಭಿಪ್ರಾಯವನ್ನು ಹುಟ್ಟುಹಾಕುತ್ತವೆ.

ಆದರೆ ಅಂತಹ ಜೀವನಕಥನಗಳನ್ನು ವ್ಯಕ್ತಿಯ, ವಿದ್ಯಮಾನಗಳ ಎಲ್ಲಾ ಮಗ್ಗಲುಗಳನ್ನೂ ಹಿಡಿದುಕೊಡದೆ ಕಥಾನಾಯಕನ ದೃಷ್ಟಿಕೋನಕ್ಕೆ ಪೂರಕವಾಗಿ ಮಾತ್ರವೇ ವಿವರಗಳನ್ನು ಹೆಕ್ಕಿ ತೆಗೆದರೆ ಅದರ ಏಕಪಕ್ಷೀಯತೆಯೇ ಅದರ ಮಿತಿಯೂ ಆಗಿಬಿಡುತ್ತದೆ.

ಸುಗತ ಅವರ ಅಪಾರ ಪರಿಶ್ರಮ ಮತ್ತು ವಿದ್ವತ್ತನ್ನು ಮೆಚ್ಚಿಕೊಳ್ಳುತ್ತಲೇ ಈ ಕೃತಿಯಲ್ಲೂ ಅಂತಹ ಒಂದು ಮಿತಿ ಇರುವುದನ್ನು ಓದುಗರು ಗಮನಿಸಲೇ ಬೇಕಾಗುತ್ತದೆ.

ಉದಾಹರಣೆಗೆ ಈ ಕೃತಿಯನ್ನು ಬರೆಯಲು ಲೇಖಕರು ಸಂದರ್ಶನ ಮಾಡಿರುವ ವ್ಯಕ್ತಿಗಳೆಲ್ಲರೂ ದೇವೇಗೌಡರ ಪ್ರತ್ಯಕ್ಷ ಅಥವಾ ಪರೋಕ್ಷ ಅಭಿಮಾನಿಗಳು ಅಥವಾ ಪೂರಕ ಅಭಿಪ್ರಾಯ ಉಳ್ಳವರೇ ಆಗಿದ್ದಾರೆ. ಹೀಗಾಗಿ ದೇವೇಗೌಡರ ಮತ್ತು ಅವರು ಹಾದುಹೋದ ಸಂದರ್ಭದ ವಿವರಗಳು ಏಕಪಕ್ಷೀಯವಾಗುತ್ತದೆ ಮತ್ತು ಒಂದೆರಡು ಕಡೆ ತಪ್ಪಾಗಿಯೂ ಅಭಿವ್ಯಕ್ತವಾಗುತ್ತದೆ.

ಅದೇ ರೀತಿ ಕೃತಿಯಲ್ಲಿ ಲೇಖಕರು ಕಥೆ ಹೇಳಲು ಅನುಸರಿಸುವ ರೀತಿ ತಟಸ್ಥ ನಿರೂಪಕನದ್ದು. ಇದು ವಿರುದ್ಧ ಮಗ್ಗುಲುಗಳನ್ನು ನಿಷ್ಪಕ್ಷವಾಗಿ ಪರಿಚಯಿಸಿ, ಸರಿ ತೂಗಿ ಒಂದು ಮೌಲಿಕ ತೀರ್ಮಾನಕ್ಕೆ ಬರುವ ರೀತಿಯದ್ದು.

ಆದರೆ ಇಲ್ಲಿ ಲೇಖಕರು ಹಲವಾರು ಬಾರಿ ತಟಸ್ಥ ನ್ಯಾಯಾಧೀಶನ ಪಾತ್ರದಿಂದ ಆಚೆ ಬಂದು ಕಕ್ಷಿದಾರನ ಪರವಾಗಿ ಸ್ವಪಕ್ಷೀಯ ವಕಾಲತ್ತು ಮಾಡುತ್ತಾರೆ.

ಲೇಖಕರು ಅದೇ ಅಭಿಪ್ರಾಯ/ ಕಥನವನ್ನು ಅದರ ತದ್ವಿರುದ್ಧ ಮಗ್ಗುಲನ್ನು ಪರಿಚಯಿಸಿ ಹೇಗೆ ಅದು ಅನ್ಯಾಯ ಅಥವಾ ಅಸಂಬದ್ಧ ಎಂಬುದನ್ನು ಸ್ಥಾಪಿಸಿ ಆ ನಂತರ ತಮ್ಮ ಅಭಿಪ್ರಾಯವನ್ನು ಹೇಳುವ ಮಾರ್ಗವನ್ನು ಅನುಸರಿಸಿದ್ದರೆ ಕೃತಿಯ ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು.

ಲೇಖಕರು ಹೀಗೆ ಒಮ್ಮೊಮ್ಮೆ ತಮ್ಮ ಕಥಾನಾಯಕನ ಅಭಿಮಾನಿಯಾಗಿ ಏಕಪಕ್ಷೀಯವಾಗುವುದರಿಂದ ಕಥನ ಕ್ರಮದಲ್ಲಿ ಹಲವು ಅಸಂಗತಗಳು ಮತ್ತು ಸಮಸ್ಯೆಗಳು ‘ಕಬಾಬ್ ಮೆ ಹಡ್ಡಿ’ಯಂತೆ ಎದುರಾಗಿ ತೊಂದರೆ ಕೊಡುತ್ತದೆ.

ಜಾತಿಯೆಂಬ ಸಾಮಾಜಿಕ-ರಾಜಕೀಯ ಬಂಡವಾಳ

ಉದಾಹರಣೆಗೆ:

ಲೇಖಕರು ಇತರ ಸ್ಥಾಪಿತ ಶ್ರೀಮಂತ ಹಾಗೂ ಮೇಲ್ಜಾತಿ ನಾಯಕರಿಗೆ ಹೋಲಿಸಿದರೆ ದೇವೇಗೌಡರು ಹೇಗೆ ಸಬಾಲ್ಟರ್ನ್ ಸಾಮಾಜಿಕ ಹಿನ್ನೆಲೆಯವರಾಗಿದ್ದರು ಎಂಬ ಬೈನರಿಯನ್ನು ಸಾಬೀತು ಮಾಡುವ ಕ್ರಮದಲ್ಲಿ ಒಕ್ಕಲಿಗರು ವರ್ಣಾಶ್ರಮದಲ್ಲಿ ಅತ್ಯಂತ ಕೆಳಜಾತಿ ಎಂದು ಬರೆಯುತ್ತಾರೆ ಮತ್ತು ಅದರಿಂದಲೇ ಅವರಿಗೆ ಮೇಲ್ಜಾತಿಗಳಿಗೆ ಲಭ್ಯವಿದ್ದ ಯಾವುದೇ ಸಾಮಾಜಿಕ ಅಥವಾ ಸಾಂಸ್ಕೃತಿಕ ಬಂಡವಾಳವಿರಲಿಲ್ಲ ಎಂದು ಪ್ರತಿಪಾದಿಸುತ್ತಾರೆ.

ಆದರೆ ಇದು ಅರ್ಧ ಸತ್ಯವೆಂಬುದನ್ನು ತಾವೇ ಮುಂದಿನ ಅಧ್ಯಾಯಗಳಲ್ಲಿ ಅನುದ್ಧಿಶ್ಯವಾಗಿ ಸಾಬೀತುಗೊಳಿಸುತ್ತಾರೆ. ದೇವೇಗೌಡರು ಡಿಪ್ಲೊಮಾ ಓದುವಾಗ ಇದ್ದ 16 ವಿದ್ಯಾರ್ಥಿಗಳಲ್ಲಿ ಒಂಭತ್ತು ಮಂದಿ ಬ್ರಾಹ್ಮಣರಾಗಿದ್ದರೆ, ದೇವೇಗೌಡರನ್ನೂ ಒಳಗೊಂಡಂತೆ ಇದ್ದ ನಾಲ್ವರು ಒಕ್ಕಲಿಗರೇ ಎರಡನೇ ಸ್ಥಾನದಲ್ಲಿದ್ದರು. ಇತರ ಹಿಂದುಳಿದ ಜಾತಿಗಳಾಗಲೀ ಅಥವಾ ದಲಿತರಾಗಲೀ ಯಾರೂ ಇರಲಿಲ್ಲ.

ಹಾಗೆಯೇ ದೇವೇಗೌಡರು ಸಿವಿಲ್ ಕಾಂಟ್ರಾಕ್ಟ್ ಪ್ರಾರಂಭಿಸಿದಾಗ ಮತ್ತು ರಾಜಕಾರಣ ಪ್ರಾರಂಭಿಸಿದಾಗ ಅವರ ಮಡದಿ ಚನ್ನಮ್ಮನವರ ಶ್ರೀಮಂತ ತವರಿನಿಂದ ಧನ ಸಹಾಯ ಪಡೆದರು ಎಂಬುದನ್ನು ಕಾಣಿಸುತ್ತಾರೆ. ಆ ಶ್ರೀಮಂತಿಕೆಯು ಭೂಮಾಲಕತ್ವದ ಮೂಲದ್ದಾಗಿದ್ದು ಮೈಸೂರು ಭಾಗದ ಹಲವಾರು ಒಕ್ಕಲಿಗರು ಐತಿಹಾಸಿಕ ಕಾರಣಗಳಿಗಾಗಿ ಆ ವೇಳೆಗಾಗಲೇ ಡಾಮಿನೆಂಟ್ ಕಾಸ್ಟ್ ಆಗಿದ್ದರು. ಸಬಾಲ್ಟರ್ನ್ ಅಲ್ಲ ಎಂಬುದನ್ನು ಸುಗತರ ಕಥನವೇ ಹೇಳುತ್ತದೆ.

ಹೀಗಾಗಿ ದೇವೇಗೌಡರ ಕುಟುಂಬ ಸಾಮಾಜಿಕ ಬಂಡವಾಳವಿದ್ದ ಡಾಮಿನೆಂಟ್ ಕಾಸ್ಟಿಗೆ ಸೇರಿದ್ದರೂ ಬಡತನದಲ್ಲಿತ್ತು ಎಂಬುದು ಸೂಕ್ತವಾದ ಹೇಳಿಕೆಯಾಗುತ್ತದೆ.

ಸಾಮಾಜಿಕ ನ್ಯಾಯವಿರೋಧಿಗಳು ಆದರ್ಶವಾದದ್ದು ಹೇಗೆ?

ಹಾಗೆಯೇ ದೇವೇಗೌಡರು ರಾಜಕಾರಣದಲ್ಲಿ ಸದಾ ಸ್ಥಾಪಿತ ಪಕ್ಷಗಳ ಜೊತೆಗಲ್ಲದೆ, ಯಾವುದಾದಾರೂ ಹೊಸ ತಾತ್ವಿಕತೆಯಲ್ಲಿ ತೊಡಗಿಕೊಂಡಿದ್ದ ಪಕ್ಷಗಳ ಜೊತೆಗಿರುತ್ತಿದ್ದರು ಎಂದು ಲೇಖಕರು ಹೇಳುತ್ತಾರೆ. ಅದಕ್ಕೆ 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ದೇವೇಗೌಡರು ಇಂದಿರಾ ಕಾಂಗ್ರೆಸ್ ವಿರುದ್ಧವಾಗಿ ಸಂಸ್ಥಾ ಕಾಂಗ್ರೆಸ್ ಸೇರಿದ್ದನ್ನು ಹಾಗೂ ಆನಂತರ ಜನತಾ ಪಕ್ಷ ಸೇರಿದ್ದನ್ನು ಉಲ್ಲೇಖಿಸುತ್ತಾರೆ.

ಇದು ದೇವೇಗೌಡರ ಹೇಳಿಕೆಯಲ್ಲ. ಲೇಖಕರ ವಿಶ್ಲೇಷಣೆ.

ಆದರೆ ಈ ಆಯ್ಕೆಯನ್ನು ಇಷ್ಟು ಸರಳವಾಗಿ ವಿಶ್ಲೇಷಿಸಬಹುದೇ?

ಹಿಂದಿರುಗಿ ನೋಡಿದರೆ ಕಾಂಗ್ರೆಸ್ ಒಡೆದಾಗ ಕಾಂಗ್ರೆಸ್ (ಒ) ಆಗಿ ರೂಪುಗೊಂಡವರೆಲ್ಲಾ ಆಗ ಇಂದಿರಾಗಾಂಧಿ ತೋರುತ್ತಿದ್ದ ಎಡಪಂಥೀಯ ಒಲವನ್ನು ವಿರೋಧಿಸುತ್ತಿದ್ದ ಊಳಿಗಮಾನ್ಯ ಶಕ್ತಿಗಳೇ. ಇಂದಿರಾಗಾಂಧಿಯವರ ಎಡ ಘೋಷಣೆಗಳೂ ಕೂಡ ಹುಸಿಯೆಂದು ಆನಂತರ ಸಾಬೀತಾದರೂ ಆಗ ಇಂದಿರಾ ವಿರೋಧವಂತೂ ಇದ್ದದ್ದು ಅದರ ಭೂಹೀನರ ಪರ, ಬಡಜನರ ಪರ ನಿಲುವುಗಳಿಂದ.

ಆನಂತರದ ಜನತಾ ಪಕ್ಷವು ಇಂದಿರಾ ಸರ್ವಾಧಿಕಾರದ ವಿರುದ್ಧ ರೂಪುಗೊಂಡಿದ್ದರೂ ಕರ್ನಾಟಕದಲ್ಲಂತೂ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಊಳಿಗಮಾನ್ಯ ಶಕ್ತಿಗಳನ್ನು ದುರ್ಬಲಗೊಳಿಸುವ ರಾಜಕಾರಣದಲ್ಲಿ ತೊಡಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಿವಸುಂದರ್

contributor

Similar News