ಗಲಾಟೆಯಲ್ಲಿ ವೃದ್ಧೆ ಸಾವು ಪ್ರಕರಣ: ಆರೋಪಿಯ ಶಿಕ್ಷೆ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ಜೂ.27: ಮನೆ ಹಿತ್ತಲಿನ ಹೂವಿನ ಗಿಡಗಳನ್ನು ಮೇಕೆಗಳು ತಿಂದ ವಿಚಾರವಾಗಿ ನಡೆದ ಗಲಾಟೆಯಲ್ಲಿ 70 ವರ್ಷದ ವೃದ್ಧೆ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಮಹಿಳೆಯ ಸನ್ನಡತೆ ಪರಿಗಣಿಸಿರುವ ಹೈಕೋರ್ಟ್ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದೆ.
ಆರೋಪಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ನಿವಾಸಿ ರೇಣುಕಾಗೆ ವಿಚಾರಣಾ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಆರೋಪಿತ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಘಟನೆ ನಡೆದ ದಿನದಿಂದ ಈವರೆಗೆ ಆಕೆ ಇತರೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದೇ ಸನ್ನಡತೆ ಕಾಯ್ದುಕೊಂಡಿದ್ದಾರೆ.
ವೃದ್ಧೆಯನ್ನು ಕೊಲೆ ಮಾಡುವ ಉದ್ದೇಶವೂ ಆಕೆಗೆ ಇರಲಿಲ್ಲ. ಕ್ಷಣ ಮಾತ್ರದಲ್ಲಿ ಉಂಟಾದ ಜಗಳದಲ್ಲಿ ಮಾಡಿದ ಹಲ್ಲೆಯ ಪರಿಣಾಮ ವೃದ್ಧೆ ಸಾವನ್ನಪ್ಪಿದ್ದಾರೆ. ಆರೋಪಿತ ಮಹಿಳೆ ಒಂದು ವರ್ಷದವರೆಗೆ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಡಬೇಕು ಮತ್ತು ಒಂದು ಲಕ್ಷ ರೂ. ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತಾ ಖಾತರಿ ಒದಗಿಸಬೇಕು ಎಂದು ಷರತ್ತು ವಿಧಿಸಿ ವಿಚಾರಣಾ ನಾಯಾಲಯ ವಿಧಿಸಿದ ಶಿಕ್ಷೆಯನ್ನು ರದ್ದುಪಡಿಸಿ ಆದೇಶ ನೀಡಿದೆ.