ಕಲಬುರಗಿ ರೈಲ್ವೆ ಸಿಬ್ಬಂದಿಯ ಅಚಾತುರ್ಯ: ಪ್ರಯಾಣಿಕರನ್ನು ಬಿಟ್ಟು ಹೋದ ರೈಲು
ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ನೂರಾರು ಪ್ರಯಾಣಿಕರು ರೈಲು ತಪ್ಪಿಸಿಕೊಂಡು ಪರದಾಡಿದ ಪ್ರಸಂಗ ರವಿವಾರ ಬೆಳಗ್ಗೆ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕಲಬುರಗಿ: ರೈಲು ಆಗಮನದ ಬಗ್ಗೆ ಮಾಹಿತಿಯನ್ನು ರೈಲ್ವೆ ಸಿಬ್ಬಂದಿ ಮೈಕ್ ನಲ್ಲಿ ಪ್ರಕಟನೆ ಮಾಡದೆ ನಿರ್ಲಕ್ಷ್ಯ ತೋರಿದ್ದರಿಂದ ನೂರಾರು ಪ್ರಯಾಣಿಕರು ರೈಲು ತಪ್ಪಿಸಿಕೊಂಡು ಪರದಾಡಿದ ಪ್ರಸಂಗ ರವಿವಾರ ಬೆಳಗ್ಗೆ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಹುಬ್ಬಳ್ಳಿಯಿಂದ ಸಿಕಂದರಾಬಾದ್ ಗೆ ಹೋಗುವ ರೈಲು (ಟ್ರೈನ್ ನಂಬರ್ 17319) ಬೆಳಗ್ಗೆ 6ಕ್ಕೆ ಕಲಬುರಗಿ ನಿಲ್ದಾಣಕ್ಕೆ ಬರಬೇಕಿತ್ತು. ಆದರೆ ಡಿಸ್ಪ್ಲೇ ಫಲಕದಲ್ಲಿ 6:32ಕ್ಕೆ ಬರುತ್ತದೆ ಎಂದು ನಮೂದಿಸಲಾಗಿತ್ತು. ಅದರಂತೆ ಸಿಕಂದರಾಬಾದ್ ಗೆ ತೆರಳಲು ಹಲವಾರು ಪ್ರಯಾಣಿಕರು ಮೊದಲನೇ ಪ್ಲಾಟ್ ಫಾರ್ಮ್ ನಲ್ಲಿ ಕಾಯುತ್ತಾ ನಿಂತಿದ್ದರು. ಆದರೆ ರೈಲು ಬರುವ ಬಗ್ಗೆ ಮತ್ತು ಯಾವ ಪ್ಲಾಟ್ ಫಾರ್ಮ್ ಗೆ ಬರುತ್ತದೆ ಎಂಬ ಬಗ್ಗೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮಾಹಿತಿ ಘೋಷಣೆಯೇ ಮಾಡಲಿಲ್ಲ.
ಅಷ್ಟರಲ್ಲೇ ರೈಲು 2ನೇ ಪ್ಲಾಟ್ ಫಾರ್ಮ್ ಗೆ ಬಂದು ಕೆಲ ಹೊತ್ತು ನಿಂತು ಸಿಕಂದರಾಬಾದ್ ಗೆ ತೆರಳಿತ್ತು. ಇದನ್ನು ಅರಿತ ಪ್ರಯಾಣಿಕರು ರೈಲ್ವೆ ಸ್ಟೇಷನ್ ವ್ಯವಸ್ಥಾಪಕರ ಕಚೇರಿಗೆ ತೆರಳಿ ಈ ಬಗ್ಗೆ ಪ್ರಶ್ನಿಸಿ ವಾಗ್ವಾದ ನಡೆಸಿದರು. ಆಗ ರೈಲ್ವೆ ವ್ಯವಸ್ಥಾಪಕರು ಮತ್ತು ಇತರ ಸಿಬ್ಬಂದಿ ತಬ್ಬಿಬ್ಬಾದರು. ಸುಮಾರು 60 ಪ್ರಯಾಣಿಕರು ಮುಂಗಡ ಟಿಕೆಟ್ ಅನ್ನು ಕಾಯ್ದಿಸಿದ್ದರು. ಅವರೂ ಪರದಾಡಿದರು.
ಇದೇ ವೇಳೆ ಹುಸೇನ್ ಸಾಗರ್ ಎಕ್ಸ್ ಪ್ರೆಸ್ ರೈಲು ಬಂದಿತು. ಬಳಿಕ ಎಲ್ಲ ಪ್ರಯಾಣಿಕರನ್ನು ಆ ರೈಲಿನ ಮೂಲಕ ಕಳಿಸಿಕೊಡಲಾಯಿತು. “ಕರ್ತವದಲ್ಲಿದ್ದ ನಮ್ಮ ಸಿಬ್ಬಂದಿ ರೈಲು ಬರುವ ಬಗ್ಗೆ ಮಾಹಿತಿಯನ್ನು ಮೈಕನಲ್ಲಿ ಅನೌನ್ಸ್ ಮಾಡದೇ ಇರುವುದರಿಂದ ಈ ಸಮಸ್ಯೆ ಎದುರಾಯಿತು. ಸಿಬ್ಬಂದಿ ನಡುವಿನ ಸಂವಹನದ ಕೊರತೆಯೇ ಇದಕ್ಕೆ ಕಾರಣ. ಈ ಅಚಾತುರ್ಯದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ” ಎಂದು ಕಲಬುರಗಿ ರೈಲ್ವೆ ನಿಲ್ದಾಣ ವ್ಯವಸ್ಥಾಪಕ ಪಿ.ಎ. ನರಗುಂದಕರ್ ತಿಳಿಸಿದ್ದಾರೆ.