ಅವಧಿ ಮೀರಿ ಪಾರ್ಟಿ ನಡೆಸಿದ್ದ ಪ್ರಕರಣ: ನಟ ದರ್ಶನ್ ಸೇರಿ ಹಲವರು ವಿಚಾರಣೆಗೆ ಹಾಜರು
ಬೆಂಗಳೂರು: ನಿಗದಿತ ಅವಧಿ ಮೀರಿ ಪಾರ್ಟಿ ನಡೆಸಿದ್ದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿ 8 ಮಂದಿ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದಾರೆ.
ನಗರದ ಜೆಟ್‍ಲ್ಯಾಗ್ ಪಬ್‍ನಲ್ಲಿ ಜ.3ರಂದು ಕಾಟೇರ ಸಿನಿಮಾ ಯಶಸ್ಸಿನ ಪಾರ್ಟಿಯನ್ನು ನಡೆಸಲಾಗಿತ್ತು. ಮಧ್ಯರಾತ್ರಿ 1.30ರ ನಂತರವೂ ಪಾರ್ಟಿ ನಡೆಸಲಾಗಿದೆ ಎಂದು ಆರೋಪಿಸಿ ರಾತ್ರಿ ಪಾಳಿಯಲ್ಲಿದ್ದ ಪೊಲೀಸರು ನೀಡಿದ ಹೇಳಿಕೆ ಮೇರೆಗೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿತ್ತು.
ಈ ಸಂಬಂಧ ಪಾರ್ಟಿಯಲ್ಲಿ ಇದ್ದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ದರ್ಶನ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ನೀನಾಸಂ ಸತೀಶ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ 8 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಶುಕ್ರವಾರ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ನಟ ದರ್ಶನ್ ಸೇರಿ 8 ಮಂದಿಯೂ ವಿಚಾರಣೆಗೆ ಒಟ್ಟಾಗಿ ಹಾಜರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ದರ್ಶನ್ ‘ಕಾಟೇರ’ ಯಶಸ್ಸು ಸಹಿಸಲಾಗದೆ ಕಾಣದ ಕೈಗಳ ಮೂಲಕ ನೋಟಿಸ್ ನೀಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಅನ್ನುವುದು ನಮಗೆ ಗೊತ್ತಿದೆ ಎಂದು ಆರೋಪಿಸಿದರು.
ನಾವು ಪಾರ್ಟಿ ಮಾಡಿರಲಿಲ್ಲ. ಊಟ ಮಾಡಿದ್ದು ಅಷ್ಟೇ. ನಮ್ಮನ್ನು ಯಾರೂ ಬಂದು ಕೇಳಿರಲಿಲ್ಲ. ನಮ್ಮಿಂದ ಯಾರಿಗೂ ತೊಂದರೆಯೂ ಆಗಿರಲಿಲ್ಲ. ಈಗ ನೋಟಿಸ್ ಕೊಟ್ಟು ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದಾರೆ. ಪ್ರಕರಣದಲ್ಲಿ ಯಾಕೆ ದರ್ಶನ್ ಹೆಸರು ತರುತ್ತಿದ್ದಾರೆ ಅನ್ನುವುದು ಗೊತ್ತಿಲ್ಲ. ದರ್ಶನ್ ಅವರನ್ನು ಯಾರು ಟಾರ್ಗೆಟ್ ಮಾಡುತ್ತಿದ್ದಾರೆಂದು ಗೊತ್ತಿದೆ. ಕೇವಲ ಊಟ ಮಾಡಿದ್ದಕ್ಕಾಗಿ ನೋಟಿಸ್ ನೀಡಿರುವುದರ ಹಿಂದೆ ದುರುದ್ದೇಶ ಇದೆ. ಇಷ್ಟು ಜನರನ್ನು ಪೊಲೀಸ್ ಠಾಣೆಗೆ ಕರೆದು ಹೇಳಿಕೆ ಪಡೆದುಕೊಂಡಿದ್ದಾರೆ ಎಂದರು ಆಕ್ರೋಶ ಹೊರಹಾಕಿದರು.
ಕ್ಲೋಸ್ ಮಾಡಬೇಕಿದ್ದ ಪಬ್‍ನಲ್ಲಿ ಮಧ್ಯರಾತ್ರಿ 1 ಗಂಟೆ ಮೇಲೆ ಮದ್ಯದ ಪಾರ್ಟಿ ಮಾಡಿದ್ದೀರಿ ಎಂದು ಆರೋಪ ಮಾಡಲಾಗುತ್ತಿದೆ. ನಮಗೆ ಯಾವ ಪೊಲೀಸರು ಕೂಡ ಪಬ್‍ಗೆ ಬಂದು ಹೇಳಿರಲಿಲ್ಲ. ನಾವು ಸಕ್ಸಸ್ ಪಾರ್ಟಿ ಮಾಡಿದ್ದು ನಿಜ, ಊಟ ಮಾಡಿದ್ದು ಅಷ್ಟೇ. ಇಷ್ಟಕ್ಕೆ ಹೋಟೆಲ್‍ಗೆ ಹೋದ ಗ್ರಾಹಕರಿಗೆ ನೋಟಿಸ್ ನೀಡುವುದು ಎಷ್ಟು ಸರಿ, ನಮ್ಮ ಮೇಲೆ ಕ್ರಮ ಜರುಗಿಸಿದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ತಿಳಿಸಿದರು.