ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅರ್ಭಟಕ್ಕೆ 3 ಮಂದಿ ಸಾವು, 289 ಮನೆಗಳಿಗೆ ಹಾನಿ: ಜಿಲ್ಲಾಧಿಕಾರಿ ಕವಳಿಕಟ್ಟಿ

Update: 2023-07-26 07:53 GMT

ಕಾರವಾರ: ಉತ್ತರಕನ್ನಡ ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿದ್ದು ಅಪಾರ ಆಸ್ತಿಪಾಸ್ತಿ ಜೀವ ಹಾನಿ ಸಂಭವಿಸಿದ್ದು ಒಟ್ಟು ನಷ್ಟದ ಲೆಕ್ಕಚಾರಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಅಧಿಕವಾಗಿ ನದಿ ಪಾತ್ರಗಳಲ್ಲಿ ನೆರೆ ಉಂಟಾಗಿತ್ತು. ನದಿ ತೀರದ ನಿವಾಸಿಗಳು ಆತಂಕದಲ್ಲೇ ದಿನ ಕಳೆದಿದ್ದರು. ಅನೇಕರ ಮನೆಗಳಿಗೆ ನೀರು ನುಗ್ಗಿದ್ದು, ಇನ್ನು ಕೆಲವೆಡೆ ಮನೆಗಳು ಕುಸಿದು ಹಾನಿಯಾಗಿದೆ. ಗದ್ದೆಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗಿದ್ದು, ಸೇತುವೆ, ಕಾಲುಸಂಕ, ರಸ್ತೆಗಳೂ ಕುಸಿದು ಹಲವೆಡೆ ಸಂಪರ್ಕ ಕಡಿತಗೊಂಡಿವೆ. ವಿದ್ಯುತ್ ಕಂಬಗಳು ಧರೆಗುರುಳಿ ಈವರೆಗೆ ಕೆಲವೆಡೆ ವಿದ್ಯುತ್ ಸಂಪರ್ಕವೂ ಆಗಿಲ್ಲ. ಇದರಿಂದಾಗಿ ನೂರಾರು ಜನ ಸಂತ್ರಸ್ತರಾಗಿ, ಸಂಕಷ್ಟ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಅಬ್ಬರದ ಭಾರಿ ಮಳೆಯಿಂದಾಗಿ ಈವರೆಗೆ 3 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಾದ್ಯಂತ ಒಟ್ಟು 289 ಮನೆಗಳಿಗೆ ಹಾನಿಯಾಗಿದೆ. 14 ಜಾನುವಾರುಗಳು ಸಾವನ್ನಪ್ಪಿವೆ. ಇದಲ್ಲದೆ ಕುಮಟಾ-ಶಿರಸಿ, ಹೆದ್ದಾರಿ, ಕುಮಟಾ-ಸಿದ್ದಾಪುರ ಹೆದ್ದಾರಿ ಹಾಗೂ ಗೋವಾ ಸಂಪರ್ಕಿಸುವ ರಾಮನಗರ- ಲೋಂಡಾ ಹದ್ದಾರಿಯಲ್ಲಿ ಧರೆಗಳು ಕುಸಿದು ಸಂಚಾರಕ್ಕೆ ಪರದಾಡುವಂತಾಗಿದೆ. ಜಲಾಶಯಗಳಲ್ಲಿ ಜಿಲ್ಲಾಡಳಿತ ಸೂಚಿಸಿದ ನೀರಿನ ಮಟ್ಟ ಕಾಯ್ದುಕೊಂಡು ಪ್ರವಾಹವಾಗದಂತೆ ಅಲ್ಪ ಪ್ರಮಾಣದಲ್ಲಿ ನೀರು ಹೊರಹಾಕಲಾಗುತ್ತಿದೆ. ಹೊನ್ನಾವರ, ಕುಮಟಾದಲ್ಲಿ 11 ಕಾಳಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಹಿರಿಯ ಅಧಿಕಾರಿಗಳನ್ನು ಇಟ್ಟು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಲಾಶಯಗಳಿಂದ ಸೀಮಿತ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು ಕೆಳ ಪ್ರದಶದಲ್ಲಿ ಯಾವುದೇ ತೊಂದರೆಯಾಗಿಲ್ಲ. ಜಲಾಶಯಗಳಲ್ಲಿ ಜಿಲ್ಲಾಡಳಿತ ಸೂಚಿಸಿದ ನೀರಿನ ಮಟ್ಟ ಕಾಯ್ದುಕೊಂಡು ಪ್ರವಾಹವಾಗದಂತೆ ಅಲ್ಪ ಪ್ರಮಾಣದಲ್ಲಿ ನೀರು ಹೊರಹಾಕಲಾಗುತ್ತಿದೆ ಎಂದರು.

ಹೊನ್ನಾವರ ಹಾಗೂ ಕುಮಟಾ ಭಾಗದಲ್ಲಿ ಅಘನಾಶಿನಿ ಹಾಗೂ ಶರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಕೆಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. 11 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 360 ಜನ ಇದ್ದಾರೆ. ಮಂಗಳವಾರ ಬೆಳಗ್ಗೆ 2 ಕಾಳಜಿ ಕೇಂದ್ರಗಳನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ಸ್ವಲ್ಪ ಪ್ರಮಾಣದಲ್ಲಿ ನೆರೆ ಕಡಿಮೆಯಾದ ಕಾರಣ ಎರಡು ಕಾಳಜಿ ಕೇಂದ್ರದಿಂದ ಜನ ಮನೆಗೆ ತೆರಳಿದ್ದಾರೆ. ಇನ್ನು ಕಾಳಜಿ ಕೇಂದ್ರದಲ್ಲಿ ಹಿರಿಯ ಅಧಿಕಾರಿಗಳನ್ನು ಇಟ್ಟು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಾಲಾಗಿದೆ ಎಂದು ತಿಳಿಸಿದರು. ಶಿರಸಿ-ಕುಮಟಾ ಸಂಪರ್ಕಿಸುವ ದೇವಿಮನೆ ಘಟ್ಟದಲ್ಲಿ ಕುಸಿದಿದ್ದ ಗುಡ್ಡವನ್ನು ತೆರವುಗೊಳಿಸಲಾಗಿದೆ. 'ರಸ್ತೆಯು ಪೂರ್ಣಗೊಳ್ಳದ ಕಾರಣ ಭಾರಿ ವಾಹನಗಳಿಗೆ ಯಲ್ಲಾಪುರ- ಅಂಕೋಲಾ ಮಾರ್ಗದ ಅರೆಬೈಲ್ ಘಟ್ಟದಲ್ಲಿ ಸಂಚಿರುವಂತೆ ನಿರ್ದೇಶನ ನೀಡಲಾಗಿದೆ. ಎಂದರು.

ಅಣಶಿ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಪರಿಶೀಲನೆ ಮಾಡಲಾಗುತ್ತದೆ. ಗುಡ್ಡದ ಮಣ್ಣು ತೆರವು ಮಾಡಿದರು ಕೂಡ ಮತ್ತೆ ಕುಸಿಯುತ್ತಿರುವ ಕಾರಣ ಭಾರಿ ವಾಹನಗಳು ಬದಲಿ ಮಾರ್ಗದಲ್ಲಿ ತೆರಳುವುದು ಉತ್ತಮ. ಈಗಾಗಲೇ ಗುಡ್ಡ ಕುಸಿಯುವ ಪ್ರದೇಶವನ್ನು ಗುರುತಿಸಿ ತೆರವುಗೊಳಿಸಲಾಗುತ್ತಿದೆ. ಆದರೆ ಇದೇ ರೀತಿ ಗುಡ್ಡ ಕುಸಿತ ಮುಂದುವರಿದಲ್ಲಿ ಈ ಹಿಂದಿನಂತೆ ರಾತ್ರಿ ಸಂಚಾರವನ್ನು ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News