2 ಬಾರಿ ಗೆದ್ದು, ಎರಡು ಬಾರಿ ಸೋತಿದ್ದರೂ ನನಗೆ ಕ್ರೀಡಾ ಸ್ಫೂರ್ತಿ ಕಡಿಮೆಯಾಗಿಲ್ಲ: ಡಾ.ಎಂ.ಸಿ.ಸುಧಾಕರ್

Update: 2023-06-17 18:29 GMT

ಬೆಂಗಳೂರು, ಜೂ.17: ‘ತಮಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕೆಲಸ ಮಾಡಬೇಕೆನ್ನುವ ಒಲವು ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.

ಶನಿವಾರ ದಂತ ವೈದ್ಯಕೀಯ ಚಿಕಿತ್ಸಾ ವಲಯದಲ್ಲಿ ದೇಶದಲ್ಲೇ ಮೊದಲ ಕೊರ್ಟಿಕೋ ಬಸಲ್ ಡೆಂಟಲ್ ಇಂಪ್ಲಾಂಟೇಷನ್ ಕುರಿತ ದಂತ ವೈದ್ಯರ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ತಾವೀಗ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದು, ಆದರೆ ತಮಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕೆಲಸ ಮಾಡಲು ಒಲವಿದೆ. ಹಾಗೆಂದ ಮಾತ್ರಕ್ಕೆ ತಮಗೆ ದೊರೆತಿರುವ ಉನ್ನತ ಶಿಕ್ಷಣ ಇಲಾಖೆ ಕಡಿಮೆಯೇನಲ್ಲ. 32 ಸರಕಾರಿ ವಿಶ್ವ ವಿದ್ಯಾಲಯಗಳು ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅತಿ ದೊಡ್ಡ ಸ್ವಾಯತ್ತ ಮತ್ತು ಪರಿಗಣಿತ ವಿಶ್ವ ವಿದ್ಯಾಲಯಗಳು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಬರುತ್ತವೆ ಎಂದು ನುಡಿದರು.

ರಾಜ್ಯದಲ್ಲಿ ನಿರುದ್ಯೋಗ ಅತಿ ದೊಡ್ಡ ಸಮಸ್ಯೆಯಾಗಿದ್ದು, ಇದಕ್ಕೆ ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೋಷವಿದೆಯೇ?. ಪಠ್ಯಕ್ರಮದಲ್ಲಿ ಲೋಪವಿದೆಯೇ ಎಂಬುದನ್ನು ಅರಿತು ಸೂಕ್ತ ಮಾರ್ಪಾಟು ಮಾಡುವ ಅಗತ್ಯವಿದೆ. ಅದೇ ರೀತಿ, ಕೈಗಾರಿಕಾ ಬೆಳವಣಿಗೆಯಾಗುತ್ತಿದ್ದು, ನುರಿತ, ಕೌಶಲ್ಯಯುತ ಸಂಪನ್ಮೂಲಕ್ಕೆ ಬೇಡಿಕೆ ಇದೆ. ಪರಿಣಿತ ಮಾನವ ಸಂಪನ್ಮೂಲ ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಇಂತಹ ಸವಾಲುಗಳನ್ನು ಸೂಕ್ತ ಶಿಕ್ಷಣ ವ್ಯವಸ್ಥೆ ಅಳವಡಿಸುವ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

2004ರಲ್ಲಿಯೇ ತಾವು ವೃತ್ತಿ ತೊರೆಯಬೇಕಾಯಿತು. ವೈದ್ಯರಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಆದರೆ ತಮ್ಮನ್ನು ರಾಜಕೀಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಮರ್ಪಿಸಿಕೊಂಡಿದ್ದೇನೆ. ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿದ್ದರೂ ತಮ್ಮ ಕೀಡಾ ಸ್ಫೂರ್ತಿ ಕಡಿಮೆಯಾಗಿಲ್ಲ. ಬದ್ಧತೆಯೊಂದಿಗೆ ಸಾರ್ವನಿಕ ಕ್ಷೇತ್ರದಲ್ಲಿದ್ದೇನೆ ಎಂದ ಅವರು,ದಂತ ವೈದ್ಯಕೀಯ ವಲಯದಲ್ಲಿ ಹಲವಾರು ರೀತಿಯ ಇಂಪ್ಲಾಂಟ್ ಚಿಕಿತ್ಸಾ ಪದ್ಧತಿಗಳಿವೆ. ಎಲ್ಲ ಮಾಹಿತಿಯೂ ರೋಗಿಗಳಿಗೆ ತಿಳಿದಿರುತ್ತದೆ. ಆದರೂ ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಜಯರಾಂ ಎಸ್.ಎಂ., ದಂತ ವೈದ್ಯಕೀಯ ಮಂಡಳಿ ಸದಸ್ಯ ಡಾ.ಕೆ.ಶಿವಶರಣ್, ಜೆಎಸ್‍ಡಿಸಿ ಅಧ್ಯಕ್ಷ ಡಾ.ವಿ.ರಂಗನಾಥ್, ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಡಾ.ಎಸ್.ಸಿ.ವೀರೇಂದ್ರ ಕುಮಾರ್ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News