ವಂದೇಭಾರತ್ ರೈಲಿನಲ್ಲಿ ಪೂರೈಸಲಾದ ಊಟದಲ್ಲಿ ಜಿರಳೆ ಪತ್ತೆ: ಐಆರ್‌ಸಿಟಿಸಿ ಪ್ರತಿಕ್ರಿಯಿಸಿದ್ದು ಹೀಗೆ..

Update: 2023-07-28 12:46 GMT

ಭೋಪಾಲ್: ಜುಲೈ 24ರಂದು ಭೋಪಾಲ್‌ನಿಂದ ಗ್ವಾಲಿಯರ್‌ಗೆ ವಂದೇಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಐಆರ್‌ಸಿಟಿಸಿ ಪೂರೈಸಿರುವ ಊಟದಲ್ಲಿ ಜಿರಳೆ ಕಂಡು ಬಂದಿದ್ದು, ಅದರಿಂದ ಅವರು ಆಘಾತಕ್ಕೀಡಾಗಿದ್ದಾರೆ. ಆ ಪ್ರಯಾಣಿಕರು ತಮಗೆ ಪೂರೈಸಲಾದ ಊಟದ ಹಲವಾರು ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ರೈಲುಗಳಲ್ಲಿ ಪೂರೈಸಲಾಗುತ್ತಿರುವ ಆಹಾರಗಳ ಗುಣಮಟ್ಟದ ಕುರಿತು ಹಲವಾರು ಬಳಕೆದಾರರು ದೂರಿದ್ದಾರೆ.

ಈ ಘಟನೆಯ ಕುರಿತು ಟ್ವೀಟ್ ಮಾಡಿರುವ ಪ್ರಯಾಣಿಕ ಸುಭೋದ್ ಪಹಲಾಜನ್, "@IRTCofficial, ವಂದೇಭಾರತ್ ರೈಲಿನಲ್ಲಿ ನನಗೆ ಪೂರೈಸಲಾದ ಆಹಾರದಲ್ಲಿ ಜಿರಳೆ ಕಂಡು ಬಂದಿದೆ" ಎಂದು ಹೇಳಿದ್ದಾರೆ. ಅವರು ಊಟದ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದು, ಆ ಚಿತ್ರಗಳಲ್ಲಿ ರೋಟಿಯೊಂದಕ್ಕೆ ಸಣ್ಣ ಜಿರಳೆ ಅಂಟಿಕೊಂಡಿರುವುದು ಕಂಡು ಬಂದಿದೆ.

ಈ ದೂರಿನ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಸೇವಾ, ಈ ಅಹಿತಕರ ಅನುಭವದ ಕುರಿತು ಕ್ಷಮೆ ಯಾಚಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ತಿಳಿಸಿದೆ.

"ಇಂತಹ ಅಹಿತಕರ ಅನುಭವ ಒದಗಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನೇರ ಸಂದೇಶದ ಮೂಲಕ ನಿಮ್ಮ ಪಿಎನ್‌ಆರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇವೆ" ಎಂದು ಅದು ಪ್ರತಿಕ್ರಿಯಿಸಿದೆ.

ಪ್ರಯಾಣಿಕ ಸುಬೋಧ್ ಪಹಲಾಜನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಐಆರ್‌ಟಿಸಿ, ಅವರಿಗೆ ಆಹಾರವನ್ನು ಮರು ಪೂರೈಸಲಾಗಿದೆ ಎಂದು ಹೇಳಿದೆ. "ಈ ಕುರಿತು ಐಆರ್‌ಟಿಸಿ ಪ್ರಾಮಾಣಿಕ ಕ್ರಮ ಕೈಗೊಂಡಿದ್ದು, ಪ್ರಯಾಣಿಕರಿಗೆ ಪರ್ಯಾಯ ಆಹಾರವನ್ನು ಒದಗಿಸಲಾಗಿದೆ. ಇಂತಹ ಘಟನೆಗಳ ಕುರಿತು ಶೂನ್ಯ ಸಹಿಷ್ಣು ಎಚ್ಚರಿಕೆಯೊಂದಿಗೆ ಪರವಾನಗಿದಾರರ ವಿರುದ್ಧ ಸೂಕ್ತ ದಂಡನಾ ಕ್ರಮವನ್ನು ಕೈಗೊಳ್ಳಲಾಗುವುದು" ಎಂದು ಐಆರ್‌ಟಿಸಿ ಪ್ರತಿಕ್ರಿಯೆ ನೀಡಿದೆ.

ಭೋಪಾಲ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರೂ ಕೂಡಾ ಟ್ವೀಟ್ ಮಾಡಿದ್ದು, ಪ್ರಯಾಣಿಕರಿಗೆ ತಕ್ಷಣವೇ ಪರ್ಯಾಯ ಆಹಾರವನ್ನು ಪೂರೈಸಲಾಗಿದ್ದು, ಪರವಾನಗಿದಾರರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

"ಈ ವಿಷಯದಲ್ಲಿ ಐಆರ್‌ಟಿಸಿ ಪ್ರಾಮಾಣಿಕ ಕ್ರಮ ಕೈಗೊಂಡಿದ್ದು, ಪ್ರಯಾಣಿಕರಿಗೆ ಪರ್ಯಾಯ ಆಹಾರ ಒದಗಿಸಿದೆ. ಇಂತಹ ಘಟನೆಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಪರವಾನಗಿದಾರರ ವಿರುದ್ಧ ಸೂಕ್ತ ದಂಡನಾ ಕ್ರಮವನ್ನು ಕೈಗೊಳ್ಳಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಭೋಪಾಲ್-ದಿಲ್ಲಿ ಮಾರ್ಗದ ವಂದೇಭಾರತ್ ಎಕ್ಸ್‌ಪ್ರೆಸ್ ರೈಲು ರಾಣಿ ಕಮಲಾಪತಿ ನಿಲ್ದಾಣದಿಂದ ಹಝರತ್ ನಿಝಾಮುದ್ದೀನ್ ನಿಲ್ದಾಣದವರೆಗೆ ಸಂಚರಿಸುತ್ತದೆ. ಇದೇ ರೈಲಿನಲ್ಲಿ ಪ್ರಯಾಣಿಸುವ ಹಲವಾರು ಪ್ರಯಾಣಿಕರೂ ಕೂಡಾ ಈ ರೈಲಿನಲ್ಲಿ ಪೂರೈಸಲಾಗುವ ಆಹಾರ ಗುಣಮಟ್ಟದ ಕುರಿತು ಟ್ವಿಟರ್‌ನಲ್ಲಿ ದೂರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News