ಗಂಗೊಳ್ಳಿ| ಮೀನುಗಾರನ ಸಾವಿನ ಪ್ರಕರಣ: ಆರೋಪಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ

Update: 2025-04-29 20:59 IST
ಗಂಗೊಳ್ಳಿ| ಮೀನುಗಾರನ ಸಾವಿನ ಪ್ರಕರಣ: ಆರೋಪಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ
  • whatsapp icon

ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಬೋಟು ಕಟ್ಟುವ ವಿಚಾರದಲ್ಲಿ ನಡೆದ ಹಲ್ಲೆಯಿಂದ ಮೀನುಗಾರ ಮೃತಪಟ್ಟ ಪ್ರಕರಣದ ಆರೋಪಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಭಟ್ಕಳ ಮೂಲದ ಚಂದ್ರಕಾಂತ ಖಾರ್ವಿ ಶಿಕ್ಷೆಗೆ ಗುರಿಯಾದ ಆರೋಪಿ. 2017 ಸೆ.15ರಂದು ರಾತ್ರಿ ವೇಳೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಧಕ್ಕೆಯಲ್ಲಿ ಮೀನು ಖಾಲಿ ಮಾಡಲು ಪ್ರಕಾಶ ಪೂಜಾರಿ ತಾನು ಕೆಲಸ ಮಾಡುತ್ತಿದ್ದ ಮೀನುಗಾರಿಕಾ ಬೋಟ್ನ ಹಗ್ಗವನ್ನು ಆರೋಪಿ ಚಂದ್ರಕಾಂತ್ ಚಾಲಕನಾಗಿದ್ದ ಬೋಟ್‌ಗೆ ಕಟ್ಟುತ್ತಿದ್ದಾಗ ಆರೋಪಿ ಪ್ರಕಾಶ್ ಪೂಜಾರಿಗೆ ಅವ್ಯಾಚವಾಗಿ ಬೈದಿದ್ದನು.

ಇದನ್ನು ಆಕ್ಷೇಪಿಸಿದ್ದಕ್ಕೆ ಚಂದ್ರಕಾಂತ ತನ್ನ ಬೋಟಿನಲ್ಲಿದ್ದ ಮರದ ಹಲಗೆಯಿಂದ ಪ್ರಕಾಶ್ ಸಾಯಬಹು ದೆನ್ನುವ ತಿಳುವಳಿಕೆಯಿದ್ದರೂ ಕೂಡ ಆತನ ತಲೆಗೆ ಹೊಡೆದಿದ್ದ. ಪರಿಣಾಮ ತಲೆಗೆ ಗಾಯಗೊಂಡ ಪ್ರಕಾಶ ಪೂಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದಿದ್ದು ಶವವು ಗಂಗೊಳ್ಳಿ ಗ್ರಾಮದ ಬೇಲಿಕೆರೆ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿತ್ತು.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಆರ್.ಗುನಗ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಆರೋಪಿ ದೋಷಿಯೆಂದು ತೀರ್ಮಾನಿಸಿ ಐಪಿಸಿ ಕಲಂ 304(2) ಅಡಿಯಲ್ಲಿ ಆರೋಪಿಗೆ 10 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ, ಕಲಂ 504 ಅಡಿ 2 ವರ್ಷ ಸಜೆ 5 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು.

ನ್ಯಾಯಾಲಯದಲ್ಲಿ ಪ್ರಕರಣದ ಸಾಕ್ಷಿ ವಿಚಾರಣೆಯನ್ನು ಅಂದಿನ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಹರಿಶ್ಚಂದ್ರ ಉದ್ಯಾವರ ನಡೆಸಿದ್ದು, ಈಗಿನ ಸರಕಾರಿ ಅಭಿಯೋಜಕ ಇಂದಿರಾ ನಾಯ್ಕ ವಿಚಾರಣೆ ಮುಂದುವರಿಸಿ ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News