ಡಾ.ಸರೋಜಿನಿ ಮಹಿಷಿ ವರದಿಯಂತೆ ಡಿ ಗ್ರೂಪ್ ಹುದ್ದೆಗೆ ಶೇ.100ರಷ್ಟು ಸ್ಥಳೀಯರಿಗೆ ಅವಕಾಶ ಕಲ್ಪಿಸಿ: ಸಂಸದ ಕೋಟ

ಉಡುಪಿ, ಎ.28: ಡಾ.ಸರೋಜಿನಿ ಮಹಿಷಿ ವರದಿಯಂತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ಶೇ. 100ರಷ್ಟು ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸ ಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಕೈಗಾರಿ ಕೋದ್ಯಮಿ ಗಳೊಂದಿಗೆ ನಡೆಸಿದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಅವರವರ ಅರ್ಹತೆಯ ಆಧಾರದ ಮೇಲೆ ಹೆಚ್ಚೆಚ್ಚು ಉದ್ಯೋಗಗಳನ್ನು ಕಲ್ಪಿಸಬೇಕು ಎಂದವರು ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.
ಡಾ.ಮಹಿಷಿ ವರದಿಯಂತೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಗಳಲ್ಲಿ ಎ, ಬಿ ಮತ್ತು ಸಿ ವರ್ಗದ ಹುದ್ದೆಗಳಿಗೆ ಅರ್ಹತೆಯನ್ನು ಆಧರಿಸಿ, ಜಿಲ್ಲೆಯ ಸ್ಥಳೀಯ ಜನರಿಗೆ ಪ್ರಥಮ ಆದ್ಯತೆಯ ಮೇಲೆ ಶೇ. 65ಕ್ಕಿಂತ ಹೆಚ್ಚು ಹುದ್ದೆಗಳನ್ನು ನೀಡಬೇಕು ಎಂದೂ ಅವರು ತಿಳಿಸಿದರು.
ಕೆಲವು ಕೈಗಾರಿಕಾ ಸಂಸ್ಥೆಗಳಲ್ಲಿ ಹೊರರಾಜ್ಯಗಳ ಕಾರ್ಮಿಕರುಗಳೇ ಹೆಚ್ಚು ಸಂಖ್ಯೆಯಲ್ಲಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಈ ಹುದ್ದೆಗಳಿಗೆ ಸ್ಥಳೀಯರು ಸೇರಲು ಮುಂದೆ ಬರುತ್ತಿಲ್ಲ ಎಂಬ ಕಾರಣ ನೀಡುತ್ತಾರೆ. ಇಂಥ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಆಯಾ ಗ್ರಾಮಪಂಚಾಯತ್‌ಗಳಲ್ಲಿ ಸಾಧ್ಯವಾದಷ್ಟು ಮಾಹಿತಿ ಪ್ರಚಾರಗೊಳಿಸಿ ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದಾಗಬೇಕು ಎಂದು ಕೋಟ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಯುವ ಜನರು ಉದ್ಯೋಗವನ್ನು ಅರಸಿ ಹೊರ ಹೋಗುತ್ತಿರುವುದು ಕಂಡುಬರುತ್ತಿದೆ. ಇದರಿಂದ ಭವಿಷ್ಯದಲ್ಲಿ ಮನೆಯಲ್ಲಿರುವ ಹಿರಿಯರ ಯೋಗ ಕ್ಷೇಮ ನೋಡಲು ಸಮಸ್ಯೆಗಳಾಗುವ ಸಾಧ್ಯತೆಗಳಿವೆ. ಡಾ. ಸರೋಜಿನಿ ಮಹಿಷಿ ವರದಿ ಪಾಲನೆ ಮಾಡುವುದರೊಂದಿಗೆ ಕನ್ನಡ ಓದಲು ಹಾಗೂ ಬರೆಯಲು ಕಲಿತಿರುವ ಸ್ಥಳೀಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸಬೇಕು. ತಪ್ಪಿದ್ದಲ್ಲಿ, ಇವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಕೈಗಾರಿಕಾ ಘಟಕಗಳಲ್ಲಿ ಬಾಂಗ್ಲಾದೇಶದ ಪ್ರಜೆಗಳು ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಹರೀಶ್ ಕುಂದರ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಗೂ ಇತರರು ಉಪಸ್ಥಿತರಿದ್ದರು.
‘ಡಾ. ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸಿನಂತೆ ಸಣ್ಣ ಕೈಗಾರಿಕೆಗಳು ಮಧ್ಯಮ ವರ್ಗದ ಕೈಗಾರಿಕೆಗಳು ಮತ್ತು ಬಹುರಾಷ್ಟ್ರೀಯ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಆದ್ಯತೆ ನೀಡುವುದು ಕಡ್ಡಾಯವಾಗಿದೆ. ಜಿಲ್ಲೆಯಾದ್ಯಂತ ಇರುವ ನಿರುದ್ಯೋಗಿಗಳು ಹಲವಾರು ಬೇಡಿಕೆಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಘಟಕಗಳ ಮಾಲಕರು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕಾಗಿದೆ.
-ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು ಸಂಸದ
ಉಡುಪಿ ಜಿಲ್ಲೆಯಲ್ಲಿ 89 ಕೈಗಾರಿಕಾ ಘಟಕಗಳು
ಉಡುಪಿ ಜಿಲ್ಲೆಯಲ್ಲಿ 37 ಸಣ್ಣ ಕೈಗಾರಿಕಾ ಘಟಕಗಳು, 45 ಮಧ್ಯಮ ಕೈಗಾರಿಕಾ ಸಂಸ್ಥೆಗಳು, 7 ಬೃಹತ್ ಕೈಗಾರಿಕಾ ಕಾರ್ಖಾನೆಗಳು ಅಸ್ತಿತ್ವದಲ್ಲಿವೆ ಎಂದು ಸಭೆಯಲ್ಲಿ ಮಾಹಿತಿಯನ್ನು ನೀಡಿದ ಸಂಸದ ಕೋಟ, ಇವುಗಳಲ್ಲಿ ಸ್ಥಳೀಯರಿಗೆ ಸಿಕ್ಕಿರುವ ಉದ್ಯೋಗದ ಅಂಕಿ ಅಂಶಗಳನ್ನು ವಿಶ್ಲೇಷಿಸಿದರು.
ಯುಪಿಸಿಎಲ್, ಕೊಚ್ಚಿನ್ ಶಿಪ್‌ಯಾರ್ಡ್, ಓಷನ್ ಪರ್ಲ್ ಮುಂತಾದ ಸಂಸ್ಥೆಗಳು ಉದ್ಯೋಗದಲ್ಲಿ ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ಸ್ಥಳೀಯರಿಗೆ ನೀಡಬೇಕೆಂದು ಸಲಹೆ ನೀಡಿದರು.
ವಿವಿಧ ಕೈಗಾರಿಕೋದ್ಯಮಿಗಳು ಮಾತನಾಡಿ ಈಗಾಗಲೇ ಬಹುತೇಕ ಸಂಸ್ಥೆಗಳಲ್ಲಿ ಶೇಕಡ 100ರಷ್ಟು ಉದ್ಯೋಗಿಗಳು ಸ್ಥಳೀಯರೇ ಆಗಿದ್ದಾರೆ. ಕೆಲವು ಕಡೆ ಸ್ಥಳೀಯ ಡಿ ದರ್ಜೆ ನೌಕರರು ಸಿಗುತ್ತಿಲ್ಲವಾದ್ದರಿಂದ ಹೊರ ರಾಜ್ಯದಿಂದ ಸೇವೆಯನ್ನು ಪಡೆಯಲಾಗುತ್ತದೆ ಎಂದು ವಿವರಿಸಿದರು.
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ
ಕೈಗಾರಿಕೋದ್ಯಮಗಳು ತಮ್ಮ ಕೈಗಾರಿಕೆಗಳ ಮುಂಭಾಗದಲ್ಲಿ ಅಳವಡಿಸಿರುವ ನಾಮ ಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆಯನ್ನು ಶೇ. 60ರಷ್ಟು ಹಾಗೂ ಇತರೆ ಭಾಷೆಯಲ್ಲಿ ಶೇ.40ರಷ್ಟು ಅಳತೆಯಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಒಂದೊಮ್ಮೆ ಇವುಗಳನ್ನು ಉಲ್ಲಂಘಿಸಿ ದ್ದಲ್ಲಿ ದಂಡ ವಿಧಿಸಲಾಗು ವುದು. ಘಟಕದ ಉತ್ಪನ್ನಗಳ ಪ್ಯಾಕೆಟ್ ಮೇಲೆ ಘಟಕದ ಹೆಸರು, ಮತ್ತಿತರ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
