ಶಾಂತರಾಜ ಐತಾಳ್‌ರ ‘ಶ್ರೀಕೃಷ್ಣ 108’ ಕೃತಿ ಬಿಡುಗಡೆ

ಉಡುಪಿ, ಎ.26: ಕಲ್ಕೂರ ಪ್ರತಿಷ್ಠಾನ ಮಂಗಳೂರು, ಇಂಪು ಗುಂಪು ಬಳಗ ಉಡುಪಿ ವತಿಯಿಂದ ಸಾಹಿತಿ ಎಚ್.ಶಾಂತರಾಜ ಐತಾಳ್ ಅವರ ಶ್ರೀಕೃಷ್ಣ 108 ಕೃತಿಯನ್ನು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶನಿವಾರ ಉಡುಪಿ ಕಿನ್ನಿಮುಲ್ಕಿಯ ಶ್ರೀದೇವಿ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಪೇಜಾವರ ಶ್ರೀ, ಸಾಹಿತ್ಯ ಶಬ್ದಗಳ ಸಮ್ಮಿಲನವಾಗಿದೆ. ಮಾತು ಅರ್ಥವನ್ನು ಹೇಗೆ ಬಿಟ್ಟಿಲ್ಲವೋ ಹಾಗೆ ಶಬ್ದಾರ್ಥಗಳ ಸಂಬಂಧವೇ ಸಾಹಿತ್ಯವಾಗಿದೆ. ಮಾನವರು ಒಬ್ಬರನ್ನೊಬ್ಬರು ಅರಿತುಕೊಳ್ಳಬೇಕಿದ್ದರೆ ಶಬ್ದದ ಭಾವನೆ ಅಗತ್ಯ. ಮಾತು ಸುಂದರವಾರವಾಗಿರುಷ್ಟು ಸಂಬಂಧ ಉತ್ತಮ ವಾಗಿ ಬೆಳೆಯುತ್ತದೆ ಎಂದರು.
ನಮ್ಮ ಮಾತು ಇನ್ನೊಬ್ಬರನ್ನು ಉದ್ವಿಗ್ನಗೊಳಿಸಬಾರದು. ಮಾತು ಹಿತಮಿತ ವಾಗಿರಬೇಕು ಹಾಗೂ ಪ್ರಿಯವಾಗಿರಬೇಕು. ಪ್ರಿಯವಾದ ಮಾತುಗಳಿಂದ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೂ ಸಂತೋಷವಾಗಿ ರುತ್ತವೆ. ಉತ್ತಮ ಮಾತಿನಿಂದ ವ್ಯವಹಾರದಲ್ಲಿಯೂ ಲಾಭ ಗಳಿಸಲು ಸಾಧ್ಯವಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಸಾಪ ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ ವಹಿಸಿದ್ದರು. ಪೆರಂಪಳ್ಳಿ ವಾಸುದೇವ ಭಟ್ ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಮೈಸೂರಿನ ಉದ್ಯಮಿ ಎಂ.ಕೃಷ್ಣದಾಸ ಪುರಾಣಿಕ, ಉದ್ಯಮಿ ರಮೇಶ್ ರಾವ್ ಬೀಡು, ವೈದ್ಯ ಡಾ.ಸಪ್ನ ಜೆ.ಉಕ್ಕಿನಡ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಎಚ್.ಶಾಂತರಾಜ ಐತಾಳ್ ಅವರಿಗೆ ‘ಕಲ್ಕೂರ ಸಾಹಿತ್ಯ ವಿಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಸಂಧ್ಯಾ ಅಡಿಗ ಕುಂದಾಪುರ ಪ್ರಾರ್ಥಿಸಿ ದರು. ಎಚ್.ಸಂಜಯ ಐತಾಳ್ ವಂದಿಸಿದರು. ಪೂರ್ಣಿಮಾ ಜನಾರ್ದನ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.