ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರ ಹಗರಣ: ಎಲ್ಲಾ 13 ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರಕಾರ ಒಪ್ಪಿಗೆ

ಬ್ರಹ್ಮಾವರ, ಎ.10: ಬ್ರಹ್ಮಾವರದಲ್ಲಿರುವ ಕರಾವಳಿಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿದೆ ಎನ್ನಲಾದ 14ರಿಂದ 20 ಕೋಟಿ ರೂ.ಅವ್ಯವಹಾರ ಪ್ರಕರಣದ ಸಮಗ್ರ ತನಿಖೆಯೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳಿಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಕಳೆದ 48 ದಿನಗಳಿಂದ ಕಾರ್ಖಾನೆ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿಯನ್ನು ನಾಳೆ ಹಿಂದೆಗೆದುಕೊಳ್ಳಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ.
ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್‌ನ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ‘ವಾರ್ತಾಭಾರತಿ’ಗೆ ಈ ವಿಷಯ ತಿಳಿಸಿದ್ದಾರೆ. ಬುಧವಾರ ಸಂಜೆ ಧರಣಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ಧರಣಿ ನಿರತರ ಎಲ್ಲಾ ಬೇಡಿಕೆಗಳನ್ನು ಸರಕಾರ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದು, ಧರಣಿಯನ್ನು ಹಿಂದೆಗೆದುಕೊಳ್ಳುವಂತೆ ಮನವಿ ಮಾಡಿದ್ದರು ಎಂದು ಅವರು ವಿವರಿಸಿದರು.
ಪ್ರಕರಣದಲ್ಲಿ ಶಾಮೀಲಾಗಿರುವ ಮೂವರು ಹಿರಿಯ ಸಹಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲಾ 13 ಮಂದಿ ಆಪಾದಿತರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರಕಾರ ಒಪ್ಪಿಗೆ ನೀಡಿದೆ. ಇದರಿಂದ ಎಲ್ಲಾ ಆಪಾದಿ ತರ ವಿರುದ್ಧವೂ ನ್ಯಾಯಾಲಯದ ವಿಚಾರಣೆಗೆ ಸರಕಾರದ ಅನುಮತಿ ಸಿಕ್ಕಂತಾಗಿದೆ. ಅಲ್ಲದೇ ವಿಶೇಷ ಪ್ರಾಸಿಕ್ಯೂಟರ್ ನೇಮಕದ ಬೇಡಿಕೆಯನ್ನೂ ಸರಕಾರ ಮಾನ್ಯ ಮಾಡಿದ್ದು, ಶಿವಪ್ರಸಾದ್ ಆಳ್ವ ಅವರನ್ನು ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿದೆ ಎಂದು ಪ್ರತಾಪ್‌ಚಂದ್ರ ಶೆಟ್ಟಿ ತಿಳಿಸಿದರು.
ಈ ಮೂಲಕ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಬಹುಕೋಟಿ ವಂಚನೆಯ ವಿರುದ್ಧ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆದಿರುವ ಜಿಲ್ಲೆಯ ರೈತರ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ ಎಂದು ಅವರು ವಿಶ್ವಾಸದ ಧ್ವನಿಯಲ್ಲಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 3:30ಕ್ಕೆ ಧರಣಿ ಚಪ್ಪರದಲ್ಲಿ ಹೋರಾಟದಲ್ಲಿ ಪಾಲ್ಗೊಂಡವರಿಗೆ ಕೃತಜ್ಞತಾ ಸಭೆಯೊಂದಿಗೆ ಕಳೆದ 49 ದಿನಗಳ ಕಾಲ ನಿರಂತರವಾಗಿ ಹಗಲು-ರಾತ್ರಿ ನಡೆದ ಧರಣಿ ಯನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಳೆದ ರಾತ್ರಿಯೇ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರಿಗೂ ಮಾಹಿತಿ ನೀಡಲಾಗಿದೆ ಎಂದೂ ಅವರು ಹೇಳಿದರು.
ನಮ್ಮೊಂದಿಗೆ ಈ ಹೋರಾಟದಲ್ಲಿ ಪಾಲ್ಗೊಂಡ ಕರ್ನಾಟಕ ಪ್ರಾಂತ ರೈತ ಸಂಘವೂ ಸೇರಿದಂತೆ ಜಿಲ್ಲೆಯ ವಿವಿಧ ರೈತ ಸಂಘಟನೆಗಳು, ಸಹಕಾರಿ ಸೊಸೈಟಿಗಳ ಪದಾಧಿಕಾರಿಗಳು, ಸಾವಿರಾರು ಮಂದಿ ರೈತರು, ಜನಸಾಮಾನ್ಯರು ಸರದಿಯ ಮೇಲೆ 24 ತಾಸುಗಳ ಕಾಲ ಹೋರಾಟದಲ್ಲಿ ಪಾಲ್ಗೊಂಡು, ಜಿಲ್ಲೆಯಲ್ಲಿ ನ್ಯಾಯಕ್ಕಾಗಿ, ಭ್ರಷ್ಟಾಚಾರದ ವಿರುದ್ಧ ನಡೆದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಬೇಕಿದೆ ಎಂದು 76ರ ಹರೆಯದಲ್ಲೂ ಪ್ರತಿದಿನ ಧರಣಿಯಲ್ಲಿ ಪಾಲ್ಗೊಂಡಿದ್ದ ಪ್ರತಾಪ್‌ಚಂದ್ರ ಶೆಟ್ಟಿ ನುಡಿದರು.
2022ರಲ್ಲಿ ಹಗರಣ ನಡೆದಾಗ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಸುಪ್ರಸಾದ್ ಶೆಟ್ಟಿ ಬೈಕಾಡಿ ಸೇರಿ ದಂತೆ 10 ಮಂದಿ ಸದಸ್ಯರು ಹಾಗೂ ಜಿಲ್ಲೆಯಲ್ಲಿ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳಾಗಿದ್ದ ಪ್ರವೀಣ್ ಬಿ.ನಾಯಕ್, ಲಕ್ಷ್ಮೀನಾರಾಯಣ ಹಾಗೂ ಮತ್ತೊಬ್ಬ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರಕಾರ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಧರಣಿ ಸ್ಥಳಕ್ಕೆ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಭೇಟಿ ನೀಡಿದ್ದರು.
ಧರಣಿಯಲ್ಲಿ ನಿವೃತ್ತ ನೌಕರರು: ನ್ಯಾಯಾಗ್ರಹಕ್ಕಾಗಿ ಅನ್ನದಾತರಿಂದ ನಡೆದಿರುವ ಅಹೋರಾತ್ರಿ ಧರಣಿಯ 48ನೇ ದಿನವಾದ ಗುರುವಾರ ನಿವೃತ್ತ ಸರಕಾರಿ ನೌಕರರು ಹಾಗೂ ಹೆಬ್ರಿ ವಲಯದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಅಧ್ಯಕ್ಷ ಕಿರಣ್ ತೋಳಾರ್, ಕಾರ್ಯದರ್ಶಿ ರೋಶನ್ ಕುಮಾರ್ ಶೆಟ್ಟಿ, ವಾದಿರಾಜ್ ಶೆಟ್ಟಿ ಮುಂದಾಳತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಿದರು.
ಉಡುಪಿ ಜಿಲ್ಲಾ ರೈತ ಸಂಘದ ಮುಖಂಡರಾದ ಕೆ.ಪ್ರತಾಪಚಂದ್ರ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಖಂಬದಕೋಣೆ, ವಂಡಬಳ್ಳಿ ಜಯರಾಮ ಶೆಟ್ಟಿ, ಅಶೋಕ್ ಶೆಟ್ಟಿ ಚೋರಾಡಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹೊಳ್ಳ ಆಯೋಗದ ವಿಚಾರಣೆ ಮುಕ್ತಾಯ
ಈ ನಡುವೆ ಹಗರಣದ ಕುರಿತು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ಸಮಿತಿಯೊಂದರ ಮೂಲಕ ನಡೆಸಿದ ತನಿಖಾ ವರದಿಯ ಆಧಾರದಲ್ಲಿ ಸಹಕಾರಿ ಇಲಾಖೆ ಆರೋಪಗಳ ತನಿಖೆಗೆ ನೇಮಿಸಿದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ರಾದಾಕೃಷ್ಣ ಹೊಳ್ಳ ಆಯೋಗವೂ ತನ್ನ ವಿಚಾರಣೆಯನ್ನು ಮುಗಿಸಿದ್ದು, ಶೀಘ್ರವೇ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದು ಪ್ರತಾಪಚಂದ್ರ ಶೆಟ್ಟಿ ತಿಳಿಸಿದರು.
ಮಂಗಳೂರಿನಲ್ಲಿ ರಾಧಾಕೃಷ್ಣ ಹೊಳ್ಳ ನಡೆಸಿದ ವಿಚಾರಣೆ ವೇಳೆ ಜಿಲ್ಲಾ ರೈತ ಸಂಘ ಹಾಜರಿದ್ದು, ದಾಖಲೆಗಳ ಸಮೇತ ತನ್ನ ಹೇಳಿಕೆಗಳನ್ನು ದಾಖಲಿಸಿದೆ ಎಂದು ಅವರು ಹೇಳಿದರು.
ರೈತರ ಹೋರಾಟಕ್ಕೆ ಮೊದಲ ಯಶಸ್ಸು:ಪ್ರತಾಪ್‌ಚಂದ್ರ ಶೆಟ್ಟಿ
ಉಡುಪಿ ಜಿಲ್ಲಾ ರೈತ ಸಂಘ, ಜಿಲ್ಲೆಯ ರೈತರ ಪ್ರತಿನಿಧಿಯಾಗಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭಾರೀ ಭ್ರಷ್ಟಾಚಾರ ಹಗರಣದ ವಿರುದ್ಧ ಕಳೆದ 48 ದಿನಗಳಿಂದ ನಡೆಸಿದ ಹೋರಾಟ ಮೊದಲ ಯಶಸ್ಸನ್ನು ಪಡೆದಿದೆ ಎಂದು ಹೋರಾಟದ ನೇತೃತ್ವ ವಹಿಸಿದ್ದ ಪ್ರತಾಪ್‌ಚಂದ್ರ ಶೆಟ್ಟಿ ಹೆಮ್ಮೆಯಿಂದ ಹೇಳಿಕೊಂಡರು.
ನಮಗೀಗ ಮೊದಲ ಹಂತದಲ್ಲಿ ಜಯ ಸಿಕ್ಕಿದೆ. ನಮ್ಮೆರಡು ಪ್ರಮುಖ ಬೇಡಿಕೆಗಳಿಗೆ ಸರಕಾರ ಒಪ್ಪಿಗೆ ಸೂಚಿಸಿದೆ. ಮೂವರು ಸರಕಾರಿ ಅಧಿಕಾರಿಗಳ ಸಹಿತ ಆಪಾದಿತರಾದ ಎಲ್ಲಾ 13 ಮಂದಿಯ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಕ್ಕಿದೆ. ಅಲ್ಲದೇ ನಮ್ಮ ಬೇಡಿಕೆಯಂತೆ ವಿಶೇಷ ಪ್ರಾಸಿಕ್ಯೂಟರ್ ನೇಮಕದ ಬೇಡಿಕೆಯನ್ನೂ ಸರಕಾರ ಈಡೇರಿಸಿದೆ ಎಂದ ಅವರು, ಇನ್ನು ಮುಂದೆ ಎಲ್ಲಾ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗುವಂತೆ ನೋಡಿಕೊಳ್ಳಬೇಕಿದೆ ಎಂದರು.
