ಉಡುಪಿ: ನ.18ರಂದು ಕನಕದಾಸ ಸಮಾಜದಿಂದ ಕನಕದಾಸ ಜಯಂತಿ
ಉಡುಪಿ, ನ.14: ಉಡುಪಿ ಜಿಲ್ಲಾ ಶ್ರೀಕನಕದಾಸ ಸಮಾಜ ಸೇವಾ ಸಂಘದ ವತಿಯಿಂದ 537ನೇ ಕನಕದಾಸ ಜಯಂತಿಯನ್ನು ನ.18ರ ಸೋಮವಾರ ಉಡುಪಿಯಲ್ಲಿ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಹನುಮಂತ ಎಸ್.ಡೊಳ್ಳಿನ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಬಂಧ 351 ಕುಂಭ ಕಳಸ ಮೆರವಣಿಗೆ 18ರ ಬೆಳಗ್ಗೆ 11ಗಂಟೆಗೆ ಅಜ್ಜರಕಾಡಿನ ಭುಜಂಗ ಪಾರ್ಕ್ ಬಳಿ ಪ್ರಾರಂಭಗೊಳ್ಳಲಿದೆ. ಇದು ಜೋಡುಕಟ್ಟೆ ಮಾರ್ಗವಾಗಿ ಉಡುಪಿ ಶ್ರೀಕೃಷ್ಣ ಮಠದ ಕನಕದಾಸ ಮಂದಿರದವರೆಗೆ ನಡೆಯಲಿದೆ ಎಂದರು.
ಕುಂಭ ಕಳಸ ಮೆರವಣಿಗೆಯನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಪ್ರಭಾವತಿ ಕೆ.ಆರ್. ಉದ್ಘಾಟಿಸಲಿದ್ದಾರೆ ಎಂದರು. ಅಪರಾಹ್ನ 1:00ಗಂಟೆಗೆ ಕನಕದಾಸರಿಗೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ವಿಶೇಷ ಪೂಜೆ ನೆರವೇರಿಸುವರು ಎಂದರು.
ಅಪರಾಹ್ನ 2 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಪುತ್ತಿಗೆಶ್ರೀಗಳು ಆಶೀರ್ವ ಚನ ನೀಡಲಿದ್ದಾರೆ. ಸಮಾಜ ಸೇವಕರಾದ ಕೆ.ಕೃಷ್ಣಮೂರ್ತಿ ಆಚಾರ್ಯರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಹನುಮಂತ ಡೊಳ್ಳಿನ ತಿಳಿಸಿದರು.
ಇದೇ ಸಂದರ್ಭ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಹಾಗೂ ವಿದ್ವಾಂಸರಾದ ವಿದ್ವಾನ್ ಗೋಪಾಲಾಚಾರ್ಯರಿಗೆ ಮೊದಲ ‘ಭಕ್ತ ಕನಕ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಪ್ರವೀಣ ಯಮನಪ್ಪ ಬೆನಕರವಾರಿ ಅವರು ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಡೊಳ್ಳಿನ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾದ್ಯಕ್ಷ ಗ್ಯಾನಪ್ಪ ಎಚ್.ಕುರಿ, ವಗೇನಪ್ಪ ಎಳಮಲಿ, ದೇವು ಎಸ್.ಪೂಜಾರಿ, ಬಸು ಕುರುಬರ್ ಉಪಸ್ಥಿತರಿದ್ದರು.