ದ್ವಿತೀಯ ಪಿಯುಸಿ ಪರೀಕ್ಷೆ-2: ನಿಷೇಧಾಜ್ಞೆ

ಉಡುಪಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಎ.24ರಿಂದ ಮೇ 8ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ಜಿಲ್ಲೆಯ ಒಟ್ಟು ಆರು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಈ ಪರೀಕ್ಷೆಗಳನ್ನು ದೋಷರಹಿತವಾಗಿ ನಡೆಸಲು ಹಾಗೂ ಪರೀಕ್ಷೆಯ ಸಂದರ್ಭದಲ್ಲಿ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟಲು, ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ 200ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಷೋಷಿಸಿ ಹಾಗೂ ಇಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023ರ ಕಲಂ 163ರನ್ವಯ ನಿಷೇಧಾಜ್ಞೆ ಜಾರಿ ಗೊಳಿಸಿ ಜಿಲ್ಲಾ ದಂಡಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಪರೀಕ್ಷಾರ್ಥಿಗಳು ಮೊಬೈಲ್, ಸೆಲ್ಯೂಲಾರ್ ಫೋನ್, ಟ್ಯಾಬ್ಲೆಟ್, ಪೆನ್‌ಡ್ರೈವ್, ಬ್ಲೂಟೂತ್ ಡಿವೈಸ್, ಸ್ಮಾರ್ಟ್‌ವಾಚ್, ಕ್ಯಾಲ್ಕುಲೇಟರ್ ಮತ್ತು ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್‌ಟೇಬಲ್, ಕೈಚೀಲ, ಪರ್ಸ್, ನೋಟುಗಳು, ಚಾರ್ಟ್, ಬಿಡಿ ಹಾಳೆಗಳು ಅಥವಾ ರೆಕಾರ್ಡಿಂಗ್ ವಸ್ತುಗಳು ಸೇರಿದಂತೆ ಇನ್ನಿತರೆ ಯಾವುದೇ ರೀತಿಯ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ಪರೀಕ್ಷಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ನಿಗದಿಪಡಿಸಿರುವ ಸೂಚನೆಗಳನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ಈ ನಿಷೇಧಾಜ್ಞೆ ಆದೇಶ ನಿಗದಿ ಪಡಿಸಿದ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ ಸುತ್ತಲೂ ಎ.24ರಿಂದ ಮೇ 8ರವರೆಗೆ ಪರೀಕ್ಷಾ ಅವಧಿಯಲ್ಲಿ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.