‘ಕಲಾ ಕೌಶಲ್ಯ-2025’ ಕಲಾ ಶಿಬಿರದ ಸಮಾರೋಪ
ಉಡುಪಿ, ಎ.17: ಯಾವುದನ್ನು ಮಾಡಬಾರದೋ ಅದನ್ನು ಇತರರಿಂದ ತಿಳಿದು ಮಾಡಬಾರದನ್ನು ಮಾಡದೇ ಇರುವುದೇ ಕಲಿಕೆಯ ಮುಖ್ಯ ಭಾಗವಾಗಿದೆ. ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಇತಿಮಿತಿ ಗೊಳಿಸಿ, ಕಲೆ ಮತ್ತು ಸಂಸ್ಕೃತಿಯನ್ನು ಜೀವನ ಶೈಲಿಯಾಗಿ ಮೈಗೂಡಿಸಿಕೊಂಡಾಗ ಅಸಾಧಾರಣ ವ್ಯಕ್ತಿತ್ವವನ್ನು ಬಳಸಿಕೊಳ್ಳಬಹುದು ಎಂದು ಮಾಹೆ ಮಣಿಪಾಲದ ಸಾಂಸ್ಕೃತಿಕ ಸಮಿತಿಯ ಚೇರ್ ಪರ್ಸನ್ ಡಾ ಶೋಭಾ ಕಾಮತ್ ಹೇಳಿದ್ದಾರೆ.
ಇಂದ್ರಾಳಿಯ ಕಲಾ ತಪಸ್ಸ್ ಸಂಗೀತ ಪಾಠಶಾಲೆಯ ವತಿಯಿಂದ ಮಕ್ಕಳಿಗಾಗಿ 8 ದಿನಗಳ ಕಾಲ ಹಮ್ಮಿಕೊಳ್ಳಲಾದ ಕಲಾ ಕೌಶಲ್ಯ ಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಅಧ್ಯಕ್ಷತೆಯನ್ನು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಸಿಎ ದೇವಾನಂದ ವಹಿಸಿದ್ದರು. ರೋಟರಿ ಉಡುಪಿಯ ನಿಯೋಜಿತ ಅಧ್ಯಕ್ಷ ಸೂರಜ್ ಕುಮಾರ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು.
ಅಂಕಣಕಾರ, ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಮಾತನಾಡಿ ದರು. ಶಿಬಿರಾರ್ಥಿಗಳಾದ ಸುನಿಧಿ ಕುಲಕುರ್ಣಿ, ಸ್ಮೃತಿ ತುಂಗ, ಆತ್ರೇಯ ರಾವ್ ಅನಿಸಿಕೆಗಳನ್ನು ಹಂಚಿಕೊಂಡರು. ಪೋಷಕರ ಪ್ರತಿನಿಧಿಯಾಗಿ ರಾಧಾಕೃಷ್ಣ ಸಾಮಗ, ತರಬೇತುದಾರರಾದ ಪಿವಿ ಭಟ್, ಯೋಗಗುರು, ಎಂಎಸ್ ಗಿರಿಧರ್, ಕ್ಯಾಲಿಗ್ರಫಿ ಗುರು ಅಪರ್ಣಾ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶಿಬಿರ ನಿರ್ದೇಶಕಿ ಶ್ರಾವ್ಯ ಎಸ್ ಬಾಸ್ರಿ ಶಿಬಿರದ ಹಿನ್ನೋಟ ಕುರಿತು ಮಾತನಾಡಿದರು. ಸುಬ್ರಹ್ಮಣ್ಯ ಬಾಸ್ರಿಯವರು ಸ್ವಾಗತಿಸಿ, ವಂದಿಸಿದರು. ಬಳಿಕ ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಶಿಬಿರಾರ್ಥಿ ಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಯಕ್ಷ ಸಂಜೀವ ಬಳಗದವರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಜರಗಿತು.