ಕುಂದಾಪುರ ತಾಲೂಕಿಗೆ ಗ್ಯಾರಂಟಿ ಯೋಜನೆಯಲ್ಲಿ 26.4 ಕೋಟಿ ರೂ.: ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ

ಕುಂದಾಪುರ, ಎ.24: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯಲ್ಲಿ ಕಳೆದ ಮಾರ್ಚ್ ತಿಂಗಳಿನಲ್ಲಿ ಕುಂದಾಪುರ ತಾಲೂಕಿಗೆ 26.4 ಕೋಟಿ ರೂ. ಬಂದಿದೆ. ಈವರೆಗೆ ತಾಲೂಕಿಗೆ 334 ಕೋಟಿ ರೂ. ಗ್ಯಾರಂಟಿ ಯೋಜನೆಯಿಂದ ಬಂದಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ತಿಳಿಸಿದ್ದಾರೆ.
ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆದರೆ ಗೃಹಲಕ್ಮೀ ಯೋಜನೆಯ ಅನುದಾನ ಕಳೆದ ಎರಡು ತಿಂಗಳಿನಿಂದ ಬಂದಿಲ್ಲ ಎಂದೂ ಅವರು ಹೇಳಿದರು.
ಮೈಸೂರು-ಕೊಲ್ಲೂರು ಬಸ್ ಪುನರಾರಂಭಕ್ಕೆ ಈಗಾಗಲೇ ಪತ್ರ ಬರೆದಿದ್ದರೂ, ಸಿಬ್ಬಂದಿ ಕೊರತೆಯಿಂದ ಬಸ್ ಸಂಚಾರ ಆರಂಭವಾಗಿಲ್ಲ. ಸಭೆಯ ನಡಾವಳಿ ಇಟ್ಟು ಸಾರಿಗೆ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಸಭೆ ಗಮನಕ್ಕೆ ತಂದರು.
ಕೊಲ್ಲೂರು ದೇವಳದ ಬಸ್ ನಿಲ್ದಾಣದಲ್ಲಿ ಸರಕಾರಿ ಬಸ್‌ಗಳಿಗೆ ಈಗ ಅವಕಾಶ ನೀಡಲಾಗಿದೆ. ಆದರೆ ಬಸ್‌ಗೆ 20 ರೂ.ಗಳಂತೆ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಕಂಡಕ್ಟರ್ ಸ್ವಂತ ಹಣದಿಂದ ಪಾವತಿಸುತ್ತಿ ದ್ದಾರೆ. ಇದನ್ನು ಉಚಿತವಾಗಿಸಬೇಕು ಎಂದು ಕೆಎಸ್ಸಾರ್ಟಿಸಿಗೆ ಅವರು ಮನವಿ ಮಾಡಿದರು.
ಗೃಹಲಕ್ಷ್ಮೀ ಅನುದಾನ ಬಾಕಿ ಇರುವ ಕೊರಗ ಕುಟುಂಬದವರಿಗೆ ಅಂಗನವಾಡಿ ಕಾರ್ಯಕರ್ತರ ಮೂಲಕ ದಾಖಲೆ ಕೊಡಿಸಿ ಹಣ ದೊರೆಯುವಂತೆ ಮಾಡಬೇಕು ಎಂದು ಗಣೇಶ್ ಕೊರಗ ಹೇಳಿದರು. ಗ್ಯಾರಂಟಿ ಸಮಿತಿ ಸಭೆಯ ಫಲಶ್ರುತಿಯಾಗಿ ಕುಂಭಾಶಿಯ 3 ಕೊರಗ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ದೊರೆ ತಿದ್ದು ಮೆಸ್ಕಾಂ ಪ್ರಯತ್ನ ಶ್ಲಾಘನೀಯ ಎಂದರು.
ತ್ರಾಸಿ-ಮೊವಾಡಿ ಮಾರ್ಗದಲ್ಲಿ ಖಾಸಗಿಯವರು ಸರಕಾರಿ ಬಸ್ ಓಡಾಟಕ್ಕೆ ತಡೆ ತಂದಿದ್ದು ನಿಗಮದ ವಕೀಲರೇ ಕೋರ್ಟಿಗೆ ಹಾಜರಾಗಿಲ್ಲ. ಆರ್‌ಟಿಒ ಅಧಿಕಾರಿಗಳು ಖಾಸಗಿಯವರ ಜತೆ ಶಾಮೀಲಾಗಿದ್ದು ಜನರಿಗೆ ತೊಂದರೆ ಯಾಗಿದೆ ಎಂದು ಹರಿಪ್ರಸಾದ್ ಹೇಳಿದರು. ಹಾಲಾಡಿ ಚೋರಾಡಿ ಕಕ್ಕುಂಜೆ ಬಸ್, ಅಮಾಸೆಬೈಲು ಜಡ್ಡಿನಗದ್ದೆ ಬಸ್ ನಿಲುಗಡೆಯಾಗಿದೆ. ಇಲ್ಲಿ ಸರಕಾರಿ ಬಸ್ ಒಂದು ಮಾತ್ರ ಇದ್ದು ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ವಸುಂಧರ ಹೆಗ್ಡೆ ವಿವರಿಸಿದರು.
ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ, ಸದಸ್ಯರಾದ ಚಂದ್ರ ಕಾಂಚನ್, ವಾಣಿ ಆರ್. ಶೆಟ್ಟಿ, ಆಶಾ ಕರ್ವಾಲೊ, ಕೋಣಿ ನಾರಾಯಣ ಆಚಾರ್, ಅರುಣ್ ಕುಮಾರ್, ಸವಿತಾ ಪೂಜಾರಿ, ಮಂಜು ಕೊಠಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಉಮೇಶ್ ಕೋಟ್ಯಾನ್, ಮೆಸ್ಕಾಂ ಎಇಇ ವಿಜಯ ಕುಮಾರ್ ಶೆಟ್ಟಿ, ಗುರುಪ್ರಸಾದ್ ಭಟ್, ಆಹಾರ ಶಾಖೆ ಉಪತಹಶೀಲ್ದಾರ್ ಸುರೇಶ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.