ಸಿಇಐಆರ್ ಪೋರ್ಟಲ್‌ನಿಂದ ಪತ್ತೆಯಾದ 27 ಮೊಬೈಲ್‌ಗಳು ವಾರೀಸುದಾರರಿಗೆ ಹಸ್ತಾಂತರ

ಉಡುಪಿ, ಎ.9: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮೂರು ತಿಂಗಳ ಅಂತರದಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಲಾದ ಒಟ್ಟು 27 ಮೊಬೈಲ್‌ಗಳನ್ನು ಇಂದು ವಾರೀಸು ದಾರರಿಗೆ ಹಸ್ತಾಂತರಿಸಲಾಯಿತು.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೆಎಸ್‌ಪಿ ಆ್ಯಪ್ ಮೂಲಕ ಮೊಬೈಲ್ ಕಾಣೆಯಾದ ದೂರುಗಳನ್ನು ಸ್ವೀಕರಿಸಿದ್ದು, ನಂತರ ಆ ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಅಪ್ಲಿಕೇಷನ್ ಅಡಿಯಲ್ಲಿ ಬ್ಲಾಕ್ ಮಾಡಲಾಗಿತ್ತು. 2025ನೇ ಸಾಲಿನಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಒಟ್ಟು 32 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ. ಈ ಮೊಬೈಲ್‌ಗಳ ಒಟ್ಟು ಮೌಲ್ಯ 4.5ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದರಲ್ಲಿ ಸುಮಾರು 5 ಮೊಬೈಲ್‌ಗಳನ್ನು ಈಗಾಗಲೇ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಉಳಿದ 27 ಮೊಬೈಲ್‌ಗಳನ್ನು ಇಂದು ವಾರೀಸು ದಾರರಿಗೆ ಉಡುಪಿ ನಗರ ಠಾಣೆಯಲ್ಲಿ ಉಡುಪಿ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ. ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ ವಿ.ಬಡಿಗೇರ್ ಹಾಗೂ ಪೊಲೀಸ್ ಉಪನಿರೀಕ್ಷಕರುಗಳಾದ ಪುನೀತ್ ಕುಮಾರ್ ಬಿ.ಈ., ಈರಣ್ಯ ಶಿರಗುಂಪಿ, ಭರತೇಶ್ ಕಂಕಣವಾಡಿ ಮತ್ತು ಗೋಪಾಲಕೃಷ್ಣ, ಜೋಗಿ ಹಾಜರಿದ್ದರು. ಈ ಮೊಬೈಲ್ ಪತ್ತೆ ಕಾರ್ಯ ದಲ್ಲಿ ಠಾಣಾ ಗಣಕಯಂತ್ರ ಸಿಬ್ಬಂದಿ ವಿನಯಕುಮಾರ ಹಾಗೂ ಉಡುಪಿ ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿ ಪಾಲ್ಗೊಂಡಿದ್ದರು.